ಮೊರೇನಾ(ಅ.05): ಮೋದಿಯ 56 ಇಂಚಿನ ಎದೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್’ನ ಹಿರಿಯ ಮುಖಂಡ ಜೋತಿರಾಧಿತ್ಯ ಸಿಂಧಿಯಾ, ಪ್ತಿದಿನ ಕಷ್ಟಪಟ್ಟು ದುಡಿಯುವ ರೈತರಿಗೆ 56 ಇಂಚಿನ ಎದೆಯಿರುತ್ತದೆಯೇ ಹೊರತು ಮೋದಿಗಲ್ಲ ಎಂದಿದ್ದಾರೆ.
ಅಂಬಾನಗರದಲ್ಲಿ ರೈತರ ಸಮಾವೇಶದಲ್ಲಿ ಮಾತನಾಡಿದ ಸಿಂಧಿಯಾ, ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ರೈತರು ಕರಾಳ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅವರ ಎದೆ 56 ಇಂಚು ಇದೆಯೇ ಹೊರತು ಮೋದಿಯದಲ್ಲ ಎಂದಿದ್ದಾರೆ.
ರೈತರ ಸಮಸ್ಯೆ ಕುರಿತಂತೆ ವಿಶೇಷ ಅಧಿವೇಶನ ನಡೆಸಿದರೂ, ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದಲೂ ರೈತರಿಗೆ ಪರಿಹಾರ ಒದಗಿಸಲು ವಿಫಲವಾಗಿದೆ. ರೈತರಿಗೆ ಸರಿಯಾಗಿ ವಿದ್ಯುತ್, ಗೊಬ್ಬರಗಳನ್ನು ಸರಿಯಾಗಿ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ದೇಶಕ್ಕೆ ಆಹಾರ ಒದಗಿಸುವ ರೈತರು 56 ಇಂಚಿನ ಎದೆ ಹೊಂದಿದ್ದಾರೆ ಎನ್ನಲು ಅರ್ಹರಾಗಿದ್ದಾರೆ. ಮೋದಿ ಬರಿ ಡಾಟಾ ಬಗ್ಗೆ ಮಾತನಾಡುತ್ತಾರೆಯೇ ಹೊರತು ಆಟ(ಗೋಧಿ ಹಿಟ್ಟು) ಬಗ್ಗೆ ಮಾತನಾಡುತ್ತಿಲ್ಲ. ಇಡೀ ದೇಶವೇ ಒಳ್ಳೆಯ ದಿನಗಳು ಎಲ್ಲಿವೆ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
