ಕ್ಯಾಲಿಫೋರ್ನಿಯಾ: ಜಾಗತಿಕ ಮಟ್ಟದ ದೈತ್ಯ ಕೃಷಿ ರಾಸಾಯನಿಕ ಹಾಗೂ ಜೈವಿಕ ತಂತ್ರಜ್ಞಾನ ಕಂಪನಿಯಾಗಿರುವ ಮಾನ್ಸಾಂಟೋ ಉತ್ಪಾದಿಸುವ ‘ರೌಂಡಪ್‌’ ಎಂಬ ಕಳೆನಾಶಕ ಔಷಧ ಕ್ಯಾನ್ಸರ್‌ ಕಾರಕ ಎಂದು ಅಮೆರಿಕದಲ್ಲಿ ಸಾಬೀತಾಗಿದೆ. ‘ರೌಂಡಪ್‌’ನಿಂದ ಕ್ಯಾನ್ಸರ್‌ ಉಂಟಾದ 2ನೇ ಪ್ರಕರಣ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ದೃಢಪಟ್ಟಿದೆ. ಆದರೆ, ಇದಕ್ಕೆ ಮಾನ್ಸಾಂಟೋ ಕಂಪನಿಯನ್ನು ಹೊಣೆ ಮಾಡಬೇಕೋ, ಬೇಡವೋ ಎಂಬ ಬಗ್ಗೆ ಇನ್ನಷ್ಟೇ ವಿಚಾರಣೆ ನಡೆಯಬೇಕಿದೆ.

ಇದೇ ವೇಳೆ, ಅಮೆರಿಕದ ವಿವಿಧ ಕೋರ್ಟ್‌ಗಳಲ್ಲಿ ಈ ಕಳೆನಾಶಕದ ವಿರುದ್ಧ 4000ಕ್ಕೂ ಹೆಚ್ಚು ಕ್ಯಾನ್ಸರ್‌ ಕೇಸುಗಳು ದಾಖಲಾಗಿವೆ ಎಂದು ವಕೀಲರು ಹೇಳಿರುವುದಾಗಿ ಸಿಎನ್‌ಎನ್‌ ವರದಿ ಮಾಡಿದೆ.

ಆತಂಕದ ವಿಷಯ ಎಂದರೆ, ಕರ್ನಾಟಕವೂ ಸೇರಿದಂತೆ ಭಾರತದ ವಿವಿಧೆಡೆ ಇದೇ ಕಳೆನಾಶಕವನ್ನು ರೈತರು ತಮ್ಮ ಜಮೀನಿನಲ್ಲಿ ಬಳಸುತ್ತಿದ್ದು, ಅಮೆರಿಕದಲ್ಲಿ ಕ್ಯಾನ್ಸರ್‌ಕಾರಕ ಎಂದು ಸಾಬೀತಾಗಿರುವುದರಿಂದ ಇಲ್ಲೂ ‘ರೌಂಡಪ್‌’ ಬಳಸುವ ರೈತರು ಎಚ್ಚರ ವಹಿಸುವ ಅಗತ್ಯವಿದೆ.

ಅಮೆರಿಕ ರೈತನಿಗೆ ಕ್ಯಾನ್ಸರ್‌: ಕ್ಯಾಲಿಫೋರ್ನಿಯಾದ ಎಡ್ವಿನ್‌ ಹಾರ್ಡ್‌ಮನ್‌ ಎಂಬಾತ ತನಗೆ ರೌಂಡಪ್‌ ಕಳೆನಾಶಕದಿಂದಾಗಿ ನಾನ್‌-ಹೊಡ್ಕಿನ್‌ ಲಿಂಫೋಮಾ ಎಂಬ ಕ್ಯಾನ್ಸರ್‌ ಬಂದಿದೆ ಎಂದು ಕ್ಯಾಲಿಫೋರ್ನಿಯಾದ ಫೆಡರಲ್‌ ಕೋರ್ಟ್‌ಗೆ ಹೋಗಿದ್ದ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌, ಎಡ್ವಿನ್‌ನ ಕ್ಯಾನ್ಸರ್‌ಗೆ ರೌಂಡಪ್‌ ಕಾರಣ ಹೌದು ಎಂದು ತೀರ್ಪು ನೀಡಿದೆ. ಎಂಟು ತಿಂಗಳ ಹಿಂದಷ್ಟೇ ಇನ್ನೊಬ್ಬ ವ್ಯಕ್ತಿಗೆ ಇದೇ ರೌಂಡಪ್‌ ಕಳೆನಾಶಕದಿಂದ ಕ್ಯಾನ್ಸರ್‌ ಉಂಟಾಗಿರುವುದಾಗಿ ಕ್ಯಾಲಿಫೋರ್ನಿಯಾ ರಾಜ್ಯ ಕೋರ್ಟ್‌ ತೀರ್ಪು ನೀಡಿತ್ತು. ಜೊತೆಗೆ ಸಂತ್ರಸ್ತನಿಗೆ 78 ದಶ ಲಕ್ಷ ಡಾಲರ್‌ (ಸುಮಾರು 540 ಕೋಟಿ ರು.) ಪರಿಹಾರ ನೀಡಬೇಕೆಂದು ಮಾನ್ಸಾಂಟೋಕ್ಕೆ ಆದೇಶಿಸಿತ್ತು.

ಈಗಿನ ಪ್ರಕರಣದಲ್ಲಿ ಎಡ್ವಿನ್‌ಗೆ ಕ್ಯಾನ್ಸರ್‌ ಬಂದಿರುವುದಕ್ಕೆ ರೌಂಡಪ್‌ ಕಳೆನಾಶಕ ಕಾರಣವಾಗಿದ್ದರೂ, ಅದಕ್ಕೆ ಕಂಪನಿಯನ್ನು ಹೊಣೆ ಮಾಡಬೇಕೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಅದರ ಬಗ್ಗೆ ಇನ್ನಷ್ಟೇ ವಿಚಾರಣೆ ನಡೆಯಬೇಕಿದೆ.

ಕ್ಯಾನ್ಸರ್‌ ಕಾರಕ ಅಂಶ ಇಲ್ಲ: ಮಾನ್ಸಾಂಟೋ

ರೌಂಡಪ್‌ ಕಳೆನಾಶಕದಲ್ಲಿ ಕ್ಯಾನ್ಸರ್‌ಕಾರಕ ಯಾವ ಅಂಶವೂ ಇಲ್ಲ, ಅದರಲ್ಲಿರುವ ಗ್ಲೈಫೋಸೇಟ್‌ ಎಂಬ ಪ್ರಮುಖ ರಾಸಾಯನಿಕವು ಕ್ಯಾನ್ಸರ್‌ಕಾರಕ ಅಲ್ಲ ಎಂಬುದು ಪರೀಕ್ಷೆಗಳಿಂದ ದೃಢಪಟ್ಟಿದೆ.

- ಮಾನ್ಸಾಂಟೋ ಕಂಪನಿ ಹೇಳಿಕೆ