ಗೌರಿ ಬಿದನೂರಿನಲ್ಲಿ  ಕೆಎಸ್ಆರ್ಟಿಸಿ ಕಂಡಕ್ಟರ್ ನಿಯಮ ಪ್ರಕಾರ ಕೋಳಿಗೂ ಟಿಕೆಟ್ ವಿಧಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಚಿಕ್ಕಬಳ್ಳಾಪುರ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವವರು ತಮ್ಮ ಜೊತೆ ಸಾಕು ಪ್ರಾಣಿಗಳನ್ನೋ, ಪಕ್ಷಿಗಳನ್ನೋ ಕರೆದೊಯ್ಯಬೇಕಾದರೆ ಟಿಕೆಟ್ ಪಡೆಯಲೇಬೇಕೆಂಬುದು ಸಂಸ್ಥೆ ನಿಯಮ. 

ಆದರೆ ಇದನ್ನರಿಯದೆ ವ್ಯಕ್ತಿಯೊಬ್ಬರು ಎರಡು ಕೋಳಿಗಳೊಂದಿಗೆ ಪ್ರಯಾಣಿಸಿರುವ ಘಟನೆ ಗೌರಿಬಿದನೂರಿನಲ್ಲಿ ಭಾನುವಾರ ನಡೆದಿದ್ದು, ಕಂಡಕ್ಟರ್ ನಿಯಮಪ್ರಕಾರ ಕೋಳಿಗೂ ಟಿಕೆಟ್ ವಿಧಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಗೌರಿಬಿದನೂರು ತಾಲೂಕಿನ ಪೆದ್ದೇನಹಳ್ಳಿಯ ಶ್ರೀನಿವಾಸ್ ಎಂಬವರು ಭಾನುವಾರ ಸಂತೆಯಲ್ಲಿ 2 ನಾಟಿ ಕೋಳಿ ಖರೀದಿಸಿ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದಾರೆ. ಈ ವೇಳೆ ಕಂಡಕ್ಟರ್ ಬಂದು ಕೋಳಿಗೂ ಅರ್ಧ ಟಿಕೆಟ್ ಖರೀದಿಸಲೇಬೇಕು ಎಂದು ಎಚ್ಚರಿಸಿದ್ದಾರೆ. ಕುರಿ, ನಾಯಿಗಳಾದರೆ ಪ್ರಯಾಣಿಕರ ಜಾಗ ಆಕ್ರಮಿಸಿಕೊಳ್ಳುವ ಕಾರಣ ಟಿಕೆಟ್ ನೀಡುವುದರಲ್ಲಿ ತಪ್ಪಿಲ್ಲ, ಆದರೆ ಕೋಳಿಗೂ
ಟಿಕೆಟ್ ನೀಡುವುದು ಯಾವ ಕಾನೂನು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕಂಡಕ್ಟರ್ ನಿಯಮ ಇರುವುದೇ ಹೀಗೆ ಎಂದು ಖಡಕ್ ಆಗಿ ಹೇಳಿದ ಬಳಿಕ ಅನಿವಾರ್ಯವಾಗಿ ಟಿಕೆಟ್‌ಗಳನ್ನು ಪಡೆದಿದ್ದಾರೆ.