ಸಿಎಂ ಎಚ್.ಡಿ. ಕುಮಾರಸ್ವಾಮಿ ಖಡಕ್ ಎಚ್ಚರಿಕೆ
ಸಿಎಂ ಎಚ್.ಡಿ ಕುಮಾರಸ್ವಾಮಿ ಖಡಕ್ ಎಚ್ಚರಿಕೆಯನ್ನು ರವಾನೆ ಮಾಡಿದ್ದಾರೆ. ಈಗಾಗಲೇ ಕರ್ನಾಟಕ ಸರ್ಕಾರದಿಂದ ರೈತರ ಸಾಲ ಮನ್ನಾ ಮಾಡಲಾಗಿದ್ದು ರೈತರಿಗೆ ನೋಟಿಸ್ ನೀಡಿದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಬೆಳಗಾವಿ: ರೈತರ ಸಾಲಮರುಪಾವತಿಗೆ ಬ್ಯಾಂಕ್ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಬ್ಯಾಂಕ್ ಬಂಧಕರು ಈ ರೀತಿಯಾಗಿ ನೋಟಿಸ್ ನೀಡಿದ್ದೇ ಆದಲ್ಲಿ ಸರ್ಕಾರ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಕನ್ನಡ ಸಾಂಸ್ಕೃತಿಕ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, 30 ಸಾವಿರ ಕೋಟಿ ರೈತರ ಸಾಲವನ್ನು ಸರ್ಕಾರ 4 ವರ್ಷದ ಅವಧಿಯಲ್ಲಿ ಹಂತ ಹಂತವಾಗಿ ಪಾವತಿಸುವ ಬಗ್ಗೆ ಈಗಾಗಲೇ ರಾಷ್ಟ್ರೀಕೃತ ಬ್ಯಾಂಕ್‌ನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಮನ್ನಾ ಮಾಡಲಾದ ಸಾಲದ ಹಣವನ್ನು ಸರ್ಕಾರ ಮುಂಬರುವ ಆಗಸ್ಟ್‌ನಲ್ಲಿ ಬ್ಯಾಂಕ್ ಗಳಿಗೆ ಪಾವತಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸತತ ಬರಗಾಲದಿಂದ ಕಂಗೆಟ್ಟಿದ್ದ ರೈತರು ಕೃಷಿಗಾಗಿ ಮಾಡಿದ್ದ ಸಾಲ ಮರುಪಾವತಿಸಲಾಗದೇ ಹೈರಾಣಾಗಿದ್ದರು. ಈ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಒಟ್ಟು 45 ಸಾವಿರ ಕೋಟಿ ಸಾಲಮನ್ನಾ ಮಾಡುವ ಮೂಲಕ ನೆರವಿಗೆ ಧಾವಿಸಿದೆ. ಆದರೆ ಇನ್ನೂ ಕೆಲವು ಬ್ಯಾಂಕ್‌ನವರು ರೈತರಿಗೆ ಸಾಲ ಮರುಪಾವತಿಸುವಂತೆ ನೋಟಿಸ್ ನೀಡಲಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಬ್ಯಾಂಕ್‌ನ ಮ್ಯಾನೇಜರ್‌ಗಳು ನೋಟಿಸ್ ನೀಡುವುದು ಸರಿಯಲ್ಲ. ಇಂತಹ ಘಟನೆಗಳ ನಡೆದರೆ ಸರ್ಕಾರ ಸುಮ್ಮನೆ ಇರುವುದಿಲ್ಲ ಎಂದು ಹೇಳಿದರು.