ಬೆಂಗಳೂರು[ಸೆ.6] ಪತ್ರಕರ್ತೆ ಗೌರಿ ಲಂಕೇಶ್  ಸ್ಮರಣೆ ನಿಮಿತ್ತ  'ಪ್ರಜಾಪ್ರಭುತ್ವದ ಆದರ್ಶವಾದ'ಕ್ಕೆ ನೀಡುವ ಮೊದಲ ಪೆನ್-ಗೌರಿ ಲಂಕೇಶ್ ಪ್ರಶಸ್ತಿಯನ್ನು ಹಿರಿಯ ವ್ಯಂಗ್ಯಚಿತ್ರಕಾರ ಪಿ. ಮುಹಮ್ಮದ್ ಅವರಿಗೆ ನೀಡಿ ಗೌರವಿಸಲಾಗಿದೆ. ಗೌರಿ ಲಂಕೇಶ್ ಅವರ ಸಮಾನತೆ, ನ್ಯಾಯದ ಕುರಿತ ಬದ್ಧತೆ, ನಿರ್ಭೀತತೆಯನ್ನು ಪ್ರಶಸ್ತಿ ಎತ್ತಿ ಹಿಡಿಯುತ್ತದೆ.

ಮೊದಲ ಪ್ರಶಸ್ತಿಗೆ ವ್ಯಂಗ್ಯಚಿತ್ರಕಾರ ಭಾಜನವಾಗಿರುವುದು ಪ್ರಮುಖ ವಿಚಾರ. ಪಿ. ಮುಹಮ್ಮದ್ ಅವರು ತಮ್ಮ ಹೆಚ್ಚಿನ ವ್ಯಂಗ್ಯ ಚಿತ್ರಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ಪ್ರತಿನಿಧಿಸುತ್ತಾ ಬಂದಿದ್ದಾರೆ. ಕನ್ನಡ ವಾರ ಪತ್ರಿಕೆ ತರಂಗ, ಇಂಗ್ಲಿಷ್ ದಿನ ಪತ್ರಿಕೆಗಳಾದ "ದಿ ಗಾರ್ಡಿಯನ್ ಆಫ್ ಬ್ಯುಸಿನಸ್ ಆಯಂಡ್ ಪೊಲಿಟಿಕ್ಸ್", ಆಂಧ್ರಪ್ರದೇಶ ಟೈಮ್ಸ್, ಕನ್ನಡ ದಿನಪತ್ರಿಕೆಗಳಾದ ಮುಂಗಾರು, ಜನವಾಹಿನಿ, ಪ್ರಜಾವಾಣಿ ಹಾಗೂ ವಿಜಯಕರ್ನಾಟಕದಲ್ಲಿ ವ್ಯಂಗ್ಯಚಿತ್ರಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

2017 ರ ಸೆಪ್ಟೆಂಬರ್ 5ರಂದು ದುಷ್ಕರ್ಮಿಗಳು ಗೌರಿ ಲಂಕೇಶ್ ಅವರನ್ನು ಅವರ ಮನೆಯ ಬಳಿಯೇ ಹತ್ಯೆ ಮಾಡಿದ್ದರು. ಗೌರಿ ಲಂಕೇಶ್ ಸಿದ್ಧಾಂತಗಳನ್ನು  ನೆನಪಿನಲ್ಲಿ ಇಡಲು ಈ ಪ್ರಶಸ್ತಿ ಕೊಡಮಾಡಲಾಗಿದೆ.