ಸಾಕ್ಷ್ಯ ಮಿಸ್:* ಗೌರಿ ಕುಸಿದು ಬಿದ್ದಿದ್ದನ್ನು ನೋಡಿ ನೀರು ಕುಡಿಸಲು ಬಂದಿದ್ದ ಗಂಡ-ಹೆಂಡತಿ, ಮಗಳು* ಪೊಲೀಸರು ಕೇಳಿದ್ದಕ್ಕೆ ಹೆದರಿ ಸಂಬಂಧಿಕರ ಮನೆಗೆ ದೌಡು

ಬೆಂಗಳೂರು: ‘ಅಪ್ಪಾ ನಮಗ್ಯಾಕೆ ಬೇಕು, ಮನೆಗೆ ಬಾ. ಆಮೇಲೆ ಪೊಲೀಸರು ನಿನ್ನನ್ನು ವಿಚಾರಣೆಗೆ ಕರಕೊಂಡು ಹೋಗ್ತಾರೆ, ಬಂದು ಬಿಡು..!’ ಗೌರಿ ಲಂಕೇಶ್ ಅವರ ಹತ್ಯೆ ನಡೆದ ಕೆಲವು ಹೊತ್ತಿಗೆ ಅಲ್ಲಿಗೆ ಬಂದ ಪೊಲೀಸರನ್ನು ಕಂಡು ತಂದೆಯೊಂದಿಗೆ ತೆರಳಿದ್ದ 14 ವರ್ಷದ ಬಾಲಕಿ ಹೀಗೆ ಆತಂಕದಿಂದ ರೋದಿಸುತ್ತಿದ್ದಳು. ಗೌರಿ ಲಂಕೇಶ್ ಅವರ ಮನೆಯ ಎದುರಿನ ಅಪಾರ್ಟ್‌'ಮೆಂಟ್‌ನಲ್ಲಿ ವಾಸ ಮಾಡುವ ಈ ಕುಟುಂಬವು ಪೊಲೀಸರ ವಿಚಾರಣೆಗೆ ಹೆದರಿ ತಡರಾತ್ರಿಯೇ ಸಂಬಂಧಿಕರ ಮನೆಗೆ ಪಲಾಯನ ಮಾಡಿದೆ ಎಂದು ತಿಳಿದುಬಂದಿದೆ.

ಮಂಗಳವಾರ ರಾತ್ರಿ ಗೌರಿ ತಮ್ಮ ಕಚೇರಿಯಿಂದ ರಾಜರಾಜೇಶ್ವರಿ ನಗರದ ‘ಐಡಿಯಲ್ ಹೋಮ್ಸ್’ ಟೌನ್‌'ಶಿಪ್‌'ನ ಮನೆಗೆ ಬಂದಿದ್ದರು. ರಾತ್ರಿ 8:05ರ ಸುಮಾರಿಗೆ ಅವರು ಮನೆಯ ಮುಂದೆ ಕಾರು ನಿಲ್ಲಿಸಿ ಗೇಟ್ ತೆಗೆದಿದ್ದರು. ಈ ವೇಳೆ ಸ್ಥಳಕ್ಕೆ ಆರೋಪಿಗಳ ಪೈಕಿ ಓರ್ವ ಗೇಟ್‌'ನ ಒಳಗೆ ಹೋಗಿ ಗೌರಿ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ.

ಕುಡಿಸಲು ತಂದ ನೀರು ಕೊಡಲಿಲ್ಲ: ರಾತ್ರಿ 8:05ರ ಸುಮಾರಿಗೆ ಜೋರಾಗಿ ಪಟಾಕಿ ಸಿಡಿದ ಅನುಭವವಾಗಿದೆ. ದೀಪಾವಳಿ ಹಬ್ಬಕ್ಕೆ ಮುನ್ನವೇ ಯಾರು ಪಟಾಕಿ ಸಿಡಿಸುತ್ತಿದ್ದಾರಲ್ಲ ಎಂದು ಗೌರಿ ಲಂಕೇಶ್ ಅವರ ಎದುರು ಮನೆಯ ನಿವಾಸಿ ಖಾಸಗಿ ಕಂಪನಿ ಉದ್ಯೋಗಿ ರಮೇಶ್ (ಹೆಸರು ಬದಲಾಯಿಸಲಾಗಿದೆ) ಹೊರಗಡೆ ಬಂದಿದ್ದರು. ಈ ವೇಳೆ ಮನೆಯೊಳಗಿನ ಕಾಂಪೌಂಡ್‌'ನಲ್ಲಿ ಗೌರಿ ಅವರು ಕುಸಿದು ಬಿದ್ದಿರುವುದನ್ನು ರಮೇಶ್ ನೋಡಿದ್ದಾರೆ. ತಲೆ ತಿರುಗಿ ಬಿದ್ದಿರಬಹುದು ಎಂದುಕೊಂಡು ಅವರು ನೀರಿನ ಬಾಟಲಿಯೊಂದಿಗೆ ತನ್ನ ಪತ್ನಿ ಮತ್ತು ಮಗಳ ಜತೆ ಗೌರಿ ಅವರ ಮನೆ ಸಮೀಪ ತೆರಳಿದ್ದರು. ಅಷ್ಟು ಹೊತ್ತಿಗೆ ಎದುರು ಮನೆಯ ನಿವಾಸಿ ಗಂಗಮ್ಮ ಸೇರಿದಂತೆ ಕೆಲವರು ಸ್ಥಳಕ್ಕೆ ಬಂದಿದ್ದರು. ರಮೇಶ್ ಕೆಳಗೆ ಬಿದ್ದಿದ್ದ ಗೌರಿ ಅವರಿಗೆ ನೀರು ಕುಡಿಸಲು ಮುಂದಾಗಿದ್ದರು. ಈ ವೇಳೆ ಸ್ಥಳದಲ್ಲಿ ರಕ್ತದ ಕಲೆಗಳು ಹೆಚ್ಚಾಗಿರುವುದನ್ನು ಕಂಡು ಆತಂಕಗೊಂಡಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಗೌರಿ ಅವರು ಸಾವನ್ನಪ್ಪಿದ್ದಾರೆ. ಅವರನ್ನು ಮುಟ್ಟುವುದು ಬೇಡ ಎಂದು ಹೇಳಿದ್ದರು. ನೀರು ಕುಡಿಸದೆ, ಗಾಬರಿಯಿಂದ ಹೊರ ಬಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದ 15 ನಿಮಿಷದಲ್ಲೇ ರಾಜರಾಜೇಶ್ವರಿ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು ಎನ್ನಲಾಗಿದೆ.

ನಮಗೆ ಗೊತ್ತಿಲ್ಲ ಎಂದ ದಂಪತಿ: ಇದಕ್ಕೂ ಮುನ್ನ ಘಟನೆ ನಡೆದ ಸ್ಥಳದಲ್ಲಿ ಐದಾರು ಮಂದಿ ಮಾತ್ರ ಇದ್ದರು. ಈ ವೇಳೆ ಸ್ಥಳದಲ್ಲಿದ್ದ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ರಮೇಶ್ ಅವರನ್ನು ಪೊಲೀಸರು ಘಟನೆ ಬಗ್ಗೆ ಕೇಳಿದ್ದಾರೆ. ಆತಂಕಗೊಂಡ ರಮೇಶ್ ಅವರ ಮಗಳು, ‘ಅಪ್ಪಾ ನೀನು ಮನೆಗೆ ಬಾ. ಪೊಲೀಸರು ನಿನ್ನನ್ನು ವಿಚಾರಣೆಗೆ ಕರೆದೊಯ್ಯುತ್ತಾರೆ. ಬಂದು ಬಿಡು’ ಎಂದು ಕಣ್ಣೀರು ಹಾಕಿದ್ದಾಳೆ. ಇದನ್ನು ನೋಡಿದ ಬಾಲಕಿಯ ತಂದೆ ಮನೆಗೆ ವಾಪಸ್ ಆಗಿದ್ದರು. ಬಳಿಕ ಇನ್ಸ್‌'ಪೆಕ್ಟರ್‌'ವೊಬ್ಬರು ರಮೇಶ್ ಅವರ ಮನೆಗೆ ಧಾವಿಸಿ ವಿಚಾರಿಸಿದಾಗಲೂ ಬಾಲಕಿ ರೋದಿಸಿದ್ದಾಳೆ. ಈ ವೇಳೆ ರಮೇಶ್ ಅವರು ನನಗೆ ಏನೂ ತಿಳಿದಿಲ್ಲ. ನಾನು ಏನನ್ನೂ ನೋಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ಸ್'ಪೆಕ್ಟರ್ ಆ ವ್ಯಕ್ತಿಯ ಬಳಿ ಎಷ್ಟು ಮನವಿ ಮಾಡಿದರೂ ಬಾಯಿ ಬಿಟ್ಟಿಲ್ಲ. ಇದಾದ ಸ್ವಲ್ಪ ಸಮಯದ ಬಳಿಕ ಸಂಬಂಧಿಕರ ಮನೆಗೆ ಪತ್ನಿ ಮತ್ತು ಮಗಳ ಜತೆ ತಡರಾತ್ರಿ ತೆರಳಿದರು ಎಂದು ಸ್ಥಳೀಯ ನಿವಾಸಿಯೊಬ್ಬರು ‘ಕನ್ನಡಪ್ರಭ’ಕ್ಕೆ ವಿವರಿಸಿದರು.

ಅಕ್ಕ ಪಕ್ಕದವರಿಗೆ ಗೌರಿ ಪರಿಚಯವಿಲ್ಲ:
ರಾಜರಾಜೇಶ್ವರಿನಗರ ಠಾಣೆ ಇನ್ಸ್‌'ಪೆಕ್ಟರ್ ಶಿವಾರೆಡ್ಡಿ ಅವರು ವಾಸವಿರುವ ಅಪಾರ್ಟ್'ಮೆಂಟ್‌'ನ ಎರಡು ರಸ್ತೆಗಳ ಮುಂದಿನ ರಸ್ತೆಯಲ್ಲೇ ಗೌರಿ ಲಂಕೇಶ್ ವಾಸವಿದ್ದರು. ಅಪಾರ್ಟ್ಮೆಂಟ್ ಮೇಲಿಂದ ನಿಂತು ನೋಡಿದರೆ ಗೌರಿ ಲಂಕೇಶ್ ಅವರ ಮನೆ ಕಾಣುತ್ತದೆ. ಇನ್ನು ಗೌರಿ ಅವರ ಎದುರು ಇರುವ ಅಪಾರ್ಟ್‌'ಮೆಂಟ್‌'ನ ಕೆಳಮಹಡಿಯಲ್ಲಿ ನಟ ದರ್ಶನ್ ಅವರಿಗೆ ಸೇರಿದ ಪ್ರೊಡಕ್ಷನ್ ಕಚೇರಿ ಕೂಡ ಇದೆ. ಗೌರಿ ಲಂಕೇಶ್ ಅವರು ಯಾರೊಬ್ಬರ ಬಳಿಯೂ ಮಾತನಾಡುತ್ತಿರಲಿಲ್ಲ. ತನ್ನ ಪಾಡಿಗೆ ತಾವು ಎಂಬಂತೆ ವಾಸವಿದ್ದರು. ಅವರು ಮನೆಗೆ ಬರುತ್ತಿದ್ದ ಸಮಯ ಯಾರಿಗೂ ತಿಳಿಯುತ್ತಿರಲಿಲ್ಲ. ಒಮ್ಮೆ ಮನೆ ಒಳಗೆ ಪ್ರವೇಶಿಸಿದರೆ, ಪುನಃ ಹೊರಗೆ ಬರುತ್ತಿದ್ದುದು ಮರುದಿನ ಬೆಳಗ್ಗೆಯೇ. ಗೌರಿ ಅವರ ಮನೆ ಕೆಲಸ ಮಾಡುವ ಮಹಿಳೆ ತಮ್ಮ ಬಳಿಯೇ ಒಂದು ಕೀ ಇಟ್ಟುಕೊಂಡಿದ್ದರು. ಮೂವರು ಮನೆ ಕೆಲಸದಾಳುಗಳು ಬಂದು-ಹೋಗಿ ಮಾಡುತ್ತಿದ್ದರು. ಅವರು ಮಧ್ಯಾಹ್ನದ ವೇಳೆ ಮನೆಗೆ ಬಂದು ಮನೆ ಶುಚಿಗೊಳಿಸಿ ಹೋಗುತ್ತಿದ್ದುದನ್ನು ಕಂಡಿದ್ದೇವೆ ಎಂದು ಗಂಗಮ್ಮ ಎಂಬುವರು ಹೇಳಿದ್ದಾರೆ.

- ಎನ್. ಲಕ್ಷ್ಮಣ್, ಕನ್ನಡಪ್ರಭ
epaper.kannadaprabha.in