ಮುಂಬೈ(ಡಿ.15): ಕೇಂದ್ರ ಸರ್ಕಾರ ನವೆಂಬರ್ 8 ರಂದು ಮಾಡಿದ ನೋಟ್'ಬ್ಯಾನ್ ಬಳಿಕ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ನೋಟ್ ಬ್ಯಾನ್ ಘೋಷಣೆ ಬಳಿಕ ಇಂದಿನವರೆಗೆ ಪ್ರತಿ 10 ಗ್ರಾಂ ಚಿನ್ನಕ್ಕೆ 3170 ರೂ ಇಳಿಕೆಯಾಗಿದೆ. ಇದರೊಂದಿಗೆ ಪ್ರತಿ 1 ಕೆ.ಜಿ ಬೆಳ್ಳಿಗೆ ರೂ. 2500 ಇಳಿಕೆಯಾಗಿದೆ.

ಆರ್ಥಿಕ ವಿಶ್ಲೇಷಕರು ಹಾಗೂ ವ್ಯಾಪಾರಿಗಳು ಕೂಡಾ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದಿದ್ದಾರೆ. ಅಲ್ಲದೆ 'ನೋಟ್ ಬ್ಯಾನ್ ಬಳಿಕ ದೇಶದಲ್ಲಿ ತಲೆದೋರಿರುವ ಹಣದ ಸಮಸ್ಯೆ ಮುಂದಿನ ಒಂದು ತಿಂಗಳಿನಲ್ಲಿ ಸುಧಾರಿಸದಿದ್ದರೆ ಚಿನ್ನದ ಬೆಲೆ ಕುಸಿದು ಪ್ರತಿ 10 ಗ್ರಾಂಗೆ 26,000 ರೂ ಆಗುವ ಸಾಧ್ಯತೆಗಳಿವೆ ಎಂದು ಅನುಮಾನಿಸಿದ್ದಾರೆ.

ನವೆಂಬರ್ 8 ರಂದು ಪ್ರತಿ 10 ಗ್ರಾಂ, ಚಿನ್ನಕ್ಕೆ 31,750 ರೂ ಇದ್ದ ಬೆಲೆ ಡಿಸೆಂಬರ್ 9ರವರೆಗೆ ಕುಸಿದು 28,580 ಆಗಿದೆ.

26 ಸಾವಿರಕ್ಕೆ ಇಳಿಯಲಿದೆ ಚಿನ್ನದ ಬೆಲೆ

ಕೇಡಿಯಾ ಕಮೋಡಿಟಿಯ ಎಂಡಿ ಅಜಯ್ ಕಮೋಡಿಯಾ ಹೇಳಿರುವ ಪ್ರಕಾರ 'ಕಳೆದ 30 ದಿನಗಳಿಂದ ದೇಶದಲ್ಲಿ ಹಣದ ಸಮಸ್ಯೆ ಹೆಚ್ಚಿದೆ, ಹೀಗಾಗಿ ಚಿನ್ನದ ಬೇಡಿಕೆ ಶೇ. 90ರಷ್ಟು ಕುಸಿದಿದೆ. ಅಮೆರಿಕಾ ಸೆಂಟ್ರಲ್ ಬ್ಯಾಂಕ್ ತನ್ನ ಬಡ್ಡಿ ದರವನ್ನು ಏರಿಸುವ ಎಲ್ಲಾ ಸಾಧ್ಯತೆಗಳಿವೆ' ಎಂದಿದ್ದಾರೆ.

ಕುಸಿಯಲಿದೆ ಚಿನ್ನದ ಬೇಡಿಕೆ

'ಮುಂದಿನ 3 ತಿಂಗಳ ಕಾಲ ಚಿನ್ನದ ಬೇಡಿಕೆ ಕುಸಿಯಲಿದೆ. ಮಾರುಕಟ್ಟೆಯಲ್ಲಿ ಹಣದ ಸಮಸ್ಯೆ ತಲೆದೋರಿರುವುದೇ ಇದಕ್ಕೆ ಪ್ರಮುಖ ಕಾರಣ. ಜನರ ಬಳಿ ಹಣವೇ ಇಲ್ಲದಿದ್ದಾಗ ಬೇಡಿಕೆ ಹೆಚ್ಚಾಗುವುದಾದರೂ ಹೇಗೆ? ಬೇಡಿಕೆ ಇಲ್ಲದಿದ್ದಾಗ ಚಿನ್ನದ ಬೆಲೆಯಲ್ಲಿ ಕುಸಿತವಾಗುವುದು ಸಹಜ' ಎನ್ನುವುದು ಜ್ಯುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ತರುಣ್ ಖನ್ನಾರ ಅಭಿಪ್ರಾಯವಾಗಿದೆ.