ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಪಂಚದ 7 ನೇ ಅತಿ ಭ್ರಷ್ಟ ಪ್ರಧಾನಿ ಎಂದು ಪ್ರತಿಷ್ಠಿತ ಬಿಬಿಸಿ ಸುದ್ದಿ ಸಂಸ್ಥೆ ಸಮೀಕ್ಷೆಯಲ್ಲಿ ದೃಢಪಟ್ಟಿದೆ ಎಂಬಂತಹ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಮಾಣದಲ್ಲಿ ಹರಿದಾಡುತ್ತಿದೆ. 

ನವದೆಹಲಿ : ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಪಂಚದ 7 ನೇ ಅತಿ ಭ್ರಷ್ಟ ಪ್ರಧಾನಿ ಎಂದು ಪ್ರತಿಷ್ಠಿತ ಬಿಬಿಸಿ ಸುದ್ದಿ ಸಂಸ್ಥೆ ಸಮೀಕ್ಷೆಯಲ್ಲಿ ದೃಢಪಟ್ಟಿದೆ ಎಂಬಂತಹ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಮಾಣದಲ್ಲಿ ಹರಿದಾಡುತ್ತಿದೆ. ಆ ಸಂದೇಶದಲ್ಲಿ ‘ನರೇಂದ್ರ ಮೋದಿ ಜಗತ್ತಿನ 7 ನೇ ಅತಿ ಭ್ರಷ್ಟ ಪ್ರಧಾನಮಂತ್ರಿ! ಮೋದಿ ತಮ್ಮ ಸುಪ್ರೀಂ ಅಧಿಕಾರವನ್ನು ತಮ್ಮ ಸ್ವಂತದ ವ್ಯವಹಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಮೋದಿ ತಮ್ಮ ಸರ್ಕಾರದ ಅವಧಿಯಲ್ಲಿ ಕೋಟ್ಯಂತರ ಹಣ ಸಂಪಾದಿಸಿದ್ದಾರೆ. ದೇಶದ ಸಂಪತ್ತನನ್ನು ತಮ್ಮ ವೈಭವೋಪೇತ ಬದುಕಿಗಾಗಿ ಬಳಕೆ ಮಾಡಿಕೊಂಡಿದ್ದಾರೆ’ ಎಂದಿದೆ. ಈ ಸಂದೇಶವನ್ನು ಮೇ 6 ರಂದು ‘ಐ ಸಪೋರ್ಟ್ ರಾಹುಲ್ ಗಾಂಧಿ’ ಫೇಸ್ ಬುಕ್ ಪೇಜ್‌ನಲ್ಲಿ ಮೊದಲು ಪೋಸ್ಟ್ ಮಾಡಲಾಗಿದೆ. ಈ ಪೇಜನ್ನು ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕುರಿತಾದ ಅನಧಿಕೃತ ಫ್ಯಾನ್‌ಪೇಜ್ ಇದಾಗಿದೆ. ಇದು ಜನಪ್ರಿಯ ‘ಟ್ರೂತ್ ಆಫ್ ಇಂಡಿಯಾ’ದ ಲೋಗೋ ವನ್ನೂ ಕೂಡ ಬಳಸಿಕೊಂಡಿದೆ. 

ಆದರೆ ನಿಜಕ್ಕೂ ಪ್ರತಿಷ್ಠಿತ ಬಿಬಿಸಿ ಸುದ್ದಿಸಂಸ್ಥೆ ಇಂಥ ದ್ದೊಂದು ಸಮೀಕ್ಷೆ ನಡೆಸಿತ್ತೇ, ಎಂದು ‘ಆಲ್ಟ್‌ನ್ಯೂಸ್’ ತನಿಖೆಗೆ ಮುಂದಾದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ. ಏಕೆಂದರೆ ಬಿಬಿಸಿ ಇಂತಹ ಯಾವು ದೇ ಸಮೀಕ್ಷೆಯನ್ನೂ ನಡೆಸಿಲ್ಲ. ಸುದ್ದಿಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಸಲುವಾಗಿ ಬಿಬಿಸಿ ಸುದ್ದಿಸಂಸ್ಥೆಯ ಹೆಸರನ್ನು ಬಳಸಿಕೊಳ್ಳಲಾಗಿದೆ.

ಬಿಬಿಸಿಯ ಅಧಿಕೃತ ವೆಬ್‌ಸೈಟ್ ನಲ್ಲಿ ಈ ರೀತಿಯ ಯಾವುದೇ ಸುದ್ದಿ ಪ್ರಕಟಗೊಂಡಿಲ್ಲ. ಬಿಬಿಸಿಯದ್ದು ಎಂದು ಹೇಳಲಾದ ಈ ಸಂದೇಶದಲ್ಲಿ ಹಲವಾರು ವ್ಯಾಕರಣ ದೋಷಗಳಿವೆ. ಪ್ರತಿಷ್ಠಿತ ಸಂಸ್ಥೆಯಾಗಿರುವ ಬಿಬಿಸಿ ಇಂತಹ ಕ್ಷುಲ್ಲಕ ತಪ್ಪುಗಳನ್ನು ಮಾಡಲು ಸಾಧ್ಯವಿಲ್ಲ. ಮಾರ್ಚ್ 2018 ರಲ್ಲಿಯೂ ಕೂಡ ಇಂಥದ್ದೇ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.