ಎಸಿಬಿ ಅಧಿಕಾರಿಯ ಸೋಗಿನಲ್ಲಿ ಪಂಗನಾಮ | ಮೊಬೈಲ್‌ ನಂಬರ್‌ ಮೂಲಕ ಪತ್ತೆ ಹಚ್ಚಿದ ಪೊಲೀಸರು

ವರದಿ: ಮೋಹನ್‌ ಭದ್ರಾವತಿ, ಕನ್ನಡಪ್ರಭ

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಸ್ಪಿ ಎಂದು ಹೇಳಿಕೊಂಡು ಇಲ್ಲೊಬ್ಬ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಲಕ್ಷಾಂತರ ರುಪಾಯಿ ವಂಚನೆ ಮಾಡಿದ್ದಾನೆ. ಈಗ ಈತನ ಜಾಡು ಹಿಡಿದು ಹೊರಟಿರುವ ಪೊಲೀಸರು ರಾಜ್ಯ ಹಾಗೂ ಕೇರಳದಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಕೇರಳ ಮೂಲದ ಈ ವಂಚಕನ ಹೆಸರು ಅಬೂಬಕರ್‌. ಈತನ ಪ್ರೇಯಸಿಯ ಮೂಲಕ ವಂಚನೆ ಬಯಲಾಗಿದೆ. 

ಏನು ಮಾಡುತ್ತಿದ್ದ?
ದಾವಣಗೆರೆ-ಹರಿ ಹರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗದಗ ಜಿಲ್ಲೆಯ ಮುಂಡರಗಿ ಹಾಗೂ ಮೈಸೂರಿನ ಹುಣಸೂರು ಸೇರಿದಂತೆ ರಾಜ್ಯದ ಇತರೆ ವಲಯಗಳ ಎಸಿಬಿ ಎಸ್ಪಿ, ಡಿವೈಎಸ್ಪಿ ಹೆಸರಿನಲ್ಲಿ ಅಧಿಕಾರಿಗಳಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಒಪ್ಪದ ಅಧಿಕಾರಿಗಳಿಗೆ ದಾಳಿಯ ಬೆದರಿಕೆಯೊ ಡಿದ್ದ. ಇದಕ್ಕೆ ಹೆದರಿದ ಅಧಿಕಾರಿಗಳು ಆರೋಪಿಯ ಬ್ಯಾಂಕ್‌ ಖಾತೆಗೆ ಲಕ್ಷ, ಲಕ್ಷ ಹಣ ಜಮಾ ಮಾಡಿದ್ದರು.

.....490926 ಮತ್ತು .....706984 ನಂಬರ್‌ಗಳಿಂದ ಕರೆ ಮಾಡುತ್ತಿದ್ದ ಈತ ಒಮ್ಮೊಮ್ಮೆ ತನ್ನ ಪ್ರೇಯಸಿ ಹಾಗೂ ಆಕೆಯ ತಾಯಿ ಮೂಲಕವೂ ಅಧಿಕಾರಿಗಳಿಗೆ ಕರೆ ಮಾಡಿಸಿ, ಹಣಕ್ಕೆ ಬೇಡಿಕೆ ಇಡುತ್ತಿದ್ದ. ಹೀಗೆ, ಹುಣಸೂರು ತಾಪಂ ಇಒ ಕೃಷ್ಣಕು​ಮಾರ್‌ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಬಳಿಕ ಮೈಸೂ ರು ಎಸಿಬಿ ಡಿವೈಎಸ್‌ಪಿ ಗಜೇಂದ್ರಪ್ರಸಾದ್‌ ಅವರನ್ನು ಕೃಷ್ಣಕುಮಾರ್‌ ಭೇಟಿ ಮಾಡಿದಾಗ ಆರೋಪಿಯ ಬಣ್ಣ ಬಯಲಾಗಿದೆ.

ತಾಯಿ-ಮಗಳ ವಿಚಾರಣೆ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರಿಯ ಅಧಿಕಾರಿಯೊಬ್ಬರ ಅಬೂಬಕರ್‌ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಮುಂಡರಗಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆಯ ಜಾಡು ಹಿಡಿದು ಹೊರಟ ಪೊಲೀಸರು ಮೊಬೈಲ್‌ ನಂಬರ್‌ ಮೂಲಕ ಈತನ ಪ್ರೇಯಸಿಯನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಆಕೆ ಮತ್ತು ಆಕೆಯ ತಾಯಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈತ ಅಬೂಬಕರ್‌ ಎಂದು ಬೆಳಕಿಗೆ ಬಂದಿದೆ. ಆರೋಪಿ ಸದ್ಯ ತಲೆಮರೆಸಿಕೊಂಡಿದ್ದು, ಪ್ರಕ ರಣ ದಾಖ​ಲಾಗಿದೆ. ಷರತ್ತಿನ ಮೇಲೆ ಅಬೂ ಬಕ್ಕರ್‌'ನ ಪ್ರೇಯಸಿ ಹಾಗೂ ಆಕೆಯ ತಾಯಿ ಯನ್ನು ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ವಂಚನೆ ಪ್ರಕರಣ ಕುರಿತಂತೆ ‘ಕನ್ನಡಪ್ರಭ' ಅಕ್ಟೋಬರ್‌ 29​ರಂದು ವಿಸ್ತೃತ ವರದಿ ಪ್ರಕಟಿಸಿತ್ತು. 

ನಕಲಿ ಖಾತೆಗಳು: ಬಿಹಾರ, ಉತ್ತರಪ್ರದೇಶ ಕಡೆಯಿಂದ ಕೆಲಸಕ್ಕೆಂದು ಬರುತಿದ್ದ ಕಾರ್ಮಿಕರ ಹೆಸರಿನಲ್ಲಿ ನಕಲಿ ಖಾತೆ ತೆರೆಯುತ್ತಿದ್ದ ಅಬೂಬಕರ್‌, ಹುಬ್ಬಳ್ಳಿಯ ಕರ್ನಾಟಕ ಬ್ಯಾಂಕ್‌ವೊಂದರಲ್ಲಿ ರುಕ್ಮಿಣಿ ಎಂಬ ಮಹಿಳೆ ಹೆಸರಿನಲ್ಲಿ ಖಾತೆ ತೆರೆದಿ​ದ್ದಾನೆ. ಈ ಖಾತೆಯಲ್ಲಿ ಈತಕನ .10 ಲಕ್ಷಕ್ಕೂ ಅಧಿಕ ಹಣವನ್ನು ಜಮೆ ಮಾಡಿ​ದ್ದಾನೆ. ಇನ್ನು ಬಿಹಾರದಲ್ಲಿ ಜಯಪ್ರಕಾಶ್‌ ಸಿಂಗ್‌ ಎಂಬ ಖಾತೆಯಲ್ಲಿ 3 ಲಕ್ಷ ರೂ. ಜಮೆಯಾಗಿದೆ. 

ಎಸಿಬಿ ಹೆಸರಿನಲ್ಲಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪಿಯ ಬಗ್ಗೆ ಮಾಹಿತಿ ಸಿಕ್ಕಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ. ಎಸಿಬಿ ಹೆಸರಿನಲ್ಲಿ ಕರೆ ಮಾಡಿ ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟರೆ ಕೂಡಲೇ ಎಸಿಬಿ ಸಹಾಯವಾಣಿಗೆ (080-2234 2100/ 9480806300) ಮಾಹಿತಿ ನೀಡಬಹುದು. 
- ಡಾ ಎಂ.ಎ.ಸಲೀಂ, ಐಜಿಪಿ