ದುಬೈ[ಮೇ.05]: ನಕಲಿ ದೂರವಾಣಿ ಕರೆಗಳು, ಸಂದೇಶಗಳು ಯಾವ ಮಟ್ಟಿಗೆ ಜನರಲ್ಲಿ ಬೇಸರ ಹುಟ್ಟಿಸಿದೆ ಎಂದರೆ, ನಿಜವಾಗಿ ಏನಾದರೂ ಆದರೂ ಜನ ನಂಬದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪಕ್ಕಾ ಮತ್ತು ತಾಜಾ ಉದಾಹರಣೆ ದೂರದ ದುಬೈನಿಂದ ಬಂದಿದೆ. ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಭರ್ಜರಿ 27 ಕೋಟಿ ರು. ಬಹುಮಾನ ಬಂದಿದೆ ಎಂದು ಲಾಟರಿ ನಡೆಸಿದವರೇ ಕರೆ ಮಾಡಿ ತಿಳಿಸಿ ದರೂ ಆತ ನಿರ್ಲಕ್ಷ್ಯ ವಹಿಸಿದ್ದ ಅಚ್ಚರಿಯ ಘಟನೆ ನಡೆದಿದೆ.

ಏನಾಯ್ತು?

ಭಾರತ ಮೂಲದ ಶೋಜಿತ್ ಕೆ.ಎಸ್. ಎಂಬುವವರು ಕಳೆದ ಏ.1ರಂದು ಆನ್‌ಲೈನ್‌ನಲ್ಲಿ ಅಬುಧಾಬಿ ಡ್ಯೂಟಿ ಫ್ರೀ ಬಿಗ್ ಟಿಕೆಟ್ ಸೀರೀಸ್‌ನಲ್ಲಿ ಟಿಕೆಟ್ ಖರೀದಿ ಮಾಡಿದ್ದರು. ಶುಕ್ರವಾರ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಅದೃಷ್ಟವಶಾತ್ ಶೋಜಿತ್ ಗೆ 15 ಲಕ್ಷ ದಿರಹಂ (27 ಕೋಟಿ ರು.) ಬಹುಮಾನ ಬಂದಿದೆ. ಈ ಹಿನ್ನೆಲೆಯಲ್ಲಿ ಆಯೋಜಕರು, ಶೋಜಿತ್‌ಗೆ ಕರೆ ಮಾಡಿ ಬಹುಮಾನ ಬಂದ ವಿಷಯ ತಿಳಿಸಲು ಹಲವು ಬಾರಿ ಯತ್ನ ನಡೆಸಿರುವರಾದರೂ, ಅದು ಫಲ ಕೊಟ್ಟಿಲ್ಲ.

ತನಗೆ ಇಷ್ಟೊಂದು ದೊಡ್ಡ ಬಹುಮಾನ ಬರಬಹುದು ಎಂಬ ನಿರೀಕ್ಷೆ ಇರದ ಕಾರಣ, ಯಾರೋ ಕುಚೋದ್ಯಕ್ಕೆ ಮಾಡಿದ ಕರೆ ಎಂದು ಶೋಜಿತ್, ಆಯೋಜಕರ ಕರೆಗಳನ್ನು ತಿರಸ್ಕರಿಸಿದ್ದರು.

ಆದರೆ ಹಾಗೆಂದು ಅಧಿಕಾರಿಗಳು ಸುಮ್ಮನಿರುವಂತಿರಲಿಲ್ಲ. ಆವರು ಹಲವು ಬಾರಿ ಶೋಜಿತ್‌ಗೆ ಕರೆ ಮಾಡಿದರೂ, ಆತ ಅದನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಇದೀಗ ಲಾಟರಿ ಆಯೋಜಕರಿಗೆ ಸಂಕಷ್ಟ ತಂದಿಟ್ಟಿದೆ. ನಾವು ಹಲವು ಭಾರಿ ವಿಜೇತರನ್ನು ಸಂಪರ್ಕಿಸಲು ಯತ್ನಿಸುತ್ತೇವೆ. ಆಗಲೂ ಅವರು ಸಂಪರ್ಕಕ್ಕೆ ಸಿಗದೇ ಹೋದಲ್ಲಿ, ನಾವು ಅವರ ಮನೆಯನ್ನು ಹುಡುಕಿಕೊಂಡು ಹೋಗಿ ಬಹುಮಾನ ಬಂದ ಮಾಹಿತಿ ತಿಳಿಸುತ್ತೇವೆ ಎಂದು ಆಯೋಜಕರು ಹೇಳಿದ್ದಾರೆ. ಜೊತೆಗೆ ಶೋಜಿತ್ ಶಾರ್ಜಾದಲ್ಲಿ ಇರುವ ಮಾಹಿತಿ ನಮಗೆ ಇದೆ. ಹೀಗಾಗಿ ಅವರನ್ನು ಹುಡುಕುವುದು ಕಷ್ಟವಾಗಲಾರದು ಎಂದಿದ್ದಾರೆ.