ನಡು ರಸ್ತೆಯಲ್ಲಿ ಪೊಲೀಸರ ಮುಂದೆ ಮಹಿಳೆಯೊಬ್ಬಳು ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೊಟೋದಲ್ಲಿ ಮಹಿಳೆಯ ಮುಖ ಮೈಯೆಲ್ಲಾ ರಕ್ತಸಿಕ್ತವಾಗಿದೆ. ಇದನ್ನು ಪೋಸ್ಟ್ ಮಾಡಿ, ಉತ್ತರ ಪ್ರದೇಶದ ಪೊಲೀಸರು ಹೆಣ್ಣುಮಕ್ಕಳನ್ನು ನಡೆಸಿಕೊಳ್ಳುವ ರೀತಿ ಇದು ಎಂದು ಒಕ್ಕಣೆ ಬರೆಯಲಾಗುತ್ತಿದೆ.

‘ಜಗತ್ ಎಕ್ಸ್ ಪ್ರೆಸ್’ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಮೊದಲಿಗೆ ಈ ಫೋಟೋವನ್ನು ಪೋಸ್ಟ್ ಮಾಡಿ, ‘ಇದು ಮೋದಿ ಮತ್ತು ಯೋಗಿ ಅವರ ಭೇಟಿ ಬಚಾವ್ ಘೋಷಣೆ. ನಮ್ಮ ಮಗಳಿಗೆ ಪೊಲೀಸರು ನೀಡಿರುವ ಕಿರುಕುಳಕ್ಕೆ ನೀವೇನು ಹೇಳುತ್ತಿರಿ? ಇದೇ ಪೋಲೀಸರು ಒಂದು ದಿನ ಎಲ್ಲರ ಮನೆಯ ಹೆಣ್ಣು ಮಕ್ಕಳನ್ನೂ ಥಳಿಸುತ್ತಾರೆ. ಮೋದಿ ಯೋಗಿ ಶೇಮ್, ಶೇಮ್’ ಎಂದು ಹಿಂದಿಯಲ್ಲಿ ಒಕ್ಕಣೆ ಬರೆಯಲಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಆದರೆ ಈ ಫೋಟೋಗಳ ಹಿಂದಿನ ವಾಸ್ತವ ಏನೆಂದು ಇಂಡಿಯಾ ಟುಡೇ ಪರಿಶೀಲಿಸಿದಾಗ ವೈರಲ್ ಆಗಿರುವ ಸುದ್ದಿ ಸುಳ್ಳು. ಫೋಟೋದ ಅಸಲಿ ಕತೆಯೇ ಬೇರೆ ಎಂದು ತಿಳಿದುಬಂದಿದೆ. ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇದು 2016 ರ ಫೋಟೋ ಎಂದು ತಿಳಿದುಬಂದಿದೆ.

ಈ ಬಗ್ಗೆ 2016 ಡಿಸೆಂಬರ್ 26 ರಂದು ಹಲವಾರು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಅವುಗಳಲ್ಲಿ ಘಟನೆ ಕುರಿತ ಪೂರ್ಣ ವಿವರ ಇದೆ. ಉತ್ತರ ಪ್ರದೇಶ ಇಬ್ಬರು ಪುರುಷರು ವೈಯಕ್ತಿಕ ಕಾರಣದಿಂದ ಮಹಿಳೆಗೆ ಮನಬಂದಂತೆ ಥಳಿಸಿದ್ದರು. ಆ ಫೋಟೋಗೆ ಬೇರೊಂದು ಒಕ್ಕಣೆ ನೀಡಿ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ.