ಭ್ರಷ್ಟಾಚಾರ ಪ್ರಕರಣದಡಿ ಕಾರ್ನಾಟಕದ ಮಾಜಿ ಸಚಿವ ಮತ್ತು ಕರ್ನಾಟಕ ಕಾಂಗ್ರೆಸ್‌ ಮುಖಂಡ ಡಿ.ಕೆ ಶಿವಕುಮಾರ್‌ ಜಾರಿ ನಿರ್ದೇಶನಾಲಯದ ವಶದಲ್ಲಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್‌ ಅವರ ದೆಹಲಿ ಬಂಗಲೆಯೊಂದರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಅಕ್ರಮವಾಗಿ ಶೇಖರಿಸಿಟ್ಟಲಕ್ಷಾಂತರ ರು. ಲಭ್ಯವಾಗಿದೆ ಎನ್ನುವ ಸಂದೇಶದೊಂದಿಗೆ ಅಪಾರ ಪ್ರಮಾಣದಲ್ಲಿ ಜೋಡಿಸಿಟ್ಟನೋಟುಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವಿಡಿಯೋದೊಂದಿಗೆ ‘ಇದು ಕರ್ನಾಟಕದ ಮಾಜಿ ಸಚಿವ ಡಿಕೆಶಿ ಅವರ ಮನೆಯಲ್ಲಿ ಕೂಡಿಟ್ಟಅಕ್ರಮ ಹಣ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡುವ ಸುದ್ದಿ ತಿಳಿಯುತ್ತಿದ್ದಂತೆಯೇ ಕೋಣೆಯಲ್ಲಿ ಕೂಡಿಟ್ಟಹಣಕ್ಕೆ ಬೆಂಕಿ ಇಡುವ ಪ್ರಯತ್ನವೂ ನಡೆದಿದೆ. ಇದು ಕಾಂಗ್ರೆಸ್‌ನ ಮತ್ತೊಂದು ಭ್ರಷ್ಟಮುಖ’ ಎಂದು ಒಕ್ಕಣೆ ಬರೆಯಲಾಗಿದೆ.

ಆದರೆ ನಿಜಕ್ಕೂ ಡಿಕೆಶಿ ಅವರ ಮನೆಯಲ್ಲಿ ಇಷ್ಟೊಂದು ಪ್ರಮಾಣದ ಅಕ್ರಮ ಹಣ ಪತ್ತೆಯಾಗಿತ್ತೇ, ಐಟಿ ದಾಳಿ ವೇಳೆ ಅದನ್ನು ಸುಡುವ ಪ್ರಯತ್ನ ನಡೆದಿತ್ತೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ.

ಬೂಮ್‌ ಲೈವ್‌ ಸುದ್ದಿ ಸಂಸ್ಥೆಯು ಸುದ್ದಿಯ ಜಾಡು ಹಿಡಿದು ತನಿಖೆಗೊಳಪಡಿಸಿದಾಗ ವೈರಲ್‌ ಆಗಿರುವ ವಿಡಿಯೋ ಯುರೋಪಿಯನ್‌ ಕಲೆಗಾರ ಅಲೆಜಾಂಡ್ರೋ ಮೋಂಗೇ ಅವರ ಕೈಚಳಕದಲ್ಲಿ ಮೂಡಿರುವ ಚಿತ್ರಕಲೆ ಎಂದು ಸ್ಪಷ್ಟವಾಗಿದೆ. ಇದೇ ವಿಡಿಯೋ ಕಳೆದ ವರ್ಷವೂ ತಮಿಳು ನಾಡಿನ ರಾಜಕಾರಣಿಯೊಬ್ಬರ ಮನೆಯಲ್ಲಿ ಲಕ್ಷ ಲಕ್ಷ ಹಣ ಎಂದು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡಿತ್ತು.

- ವೈರಲ್ ಚೆಕ್