ಚಾಲಕನ ನಿಯಂತ್ರಣ ತಪ್ಪಿ ಇನ್ನೇನು ಧರೆಗುರುಳಬೇಕಿದ್ದ ಬಸ್ಸು ಅಚಾನಕ್‌ ಆಗಿ ನಿಂತು, ನೂರಾರು ಜನರು ಬದುಕುಳಿದಿದ್ದಾರಂತೆ. ಹೀಗೆ ಬದುಕುಳಿಯಲು ಆನೆ ಕಾರಣವಂತೆ. ಹೌದು ಆನೆಯೊಂದು ಬಸ್‌ ದಬ್ಬುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಈ ಫೋಟೋವನ್ನು ಪೋಸ್ಟ್‌ ಮಾಡಿ, ಈ ಆನೆಯು ಪ್ರಪಾತಕ್ಕೆ ಬೀಳುತ್ತಿದ್ದ ಬಸ್ಸನ್ನು ತಡೆದು ನೂರಾರು ಜನರ ಪ್ರಾಣ ಉಳಿಸಿದೆ’ ಎಂದು ಒಕ್ಕಣೆ ಬರೆಯಲಾಗಿದೆ. ಘಟನೆಯು ಉತ್ತರಾಖಂಡದಲ್ಲಿ ನಡೆದಿದೆ ಎಂದು ಹೇಳಲಾಗಿದೆ.

ಆದರೆ ನಿಜಕ್ಕೂ ಆನೆ ಇಂಥದ್ದೊಂದು ಸಾಹಸ ಮಾಡಿತೇ ಎಂದು ಸುದ್ದಿಸಂಸ್ಥೆಯೊಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟ ನಡೆಸಿದಾಗ ಈ ಚಿತ್ರವು ಭಾರತದ್ದಲ್ಲ, ಬಾಂಗ್ಲಾ ದೇಶದ್ದು ಎಂದು ತಿಳಿದುಬಂದಿದೆ.

2007 ರಲ್ಲಿ ಸುದ್ದಿಸಂಸ್ಥೆಯೊಂದು ‘ಬಾಂಗ್ಲಾದೇಶದ ಚಂಡಮಾರುತಕ್ಕೆ 1000 ಜನರು ಬಲಿ’ ಎಂಬ ಶೀರ್ಷಿಕೆಯಡಿ ಪ್ರಕಟಿಸಿದ್ದ ವರದಿಯಲ್ಲಿ ಇದೇ ರೀತಿಯ ಫೋಟೋ ಇದೆ. ಅದರ ಕೆಳಗೆæ ‘ ದಕ್ಷಿಣ ಬಾಂಗ್ಲಾದ ರಾಜಧಾನಿ ಢಾಕಾದಲ್ಲಿ ರಸ್ತೆಗೆ ಅಡ್ಡಲಾಗಿದ್ದ ಬಿದ್ದಿದ್ದ ಬಸ್‌ವೊಂದನ್ನು ಆನೆ ಸಹಾಯದಿಂದ ತೆರವುಗೊಳಿಸಲಾಯಿತು’ ಎಂದಿದೆ. ಅಲ್ಲಿಗೆ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟ. 2007ರಲ್ಲಿ ಬಾಂಗ್ಲಾದೇಶದಲ್ಲಿ ಅಪ್ಪಳಿಸಿದ್ದ ಚಂಡಮಾರುತವೂ 150000 ಜನರನ್ನು ಬಲಿ ಪಡೆದಿತ್ತು.

- ವೈರಲ್ ಚೆಕ್