ನವದೆಹಲಿ[ಅ.05]: ಭೂಗತ ಪಾತಕಿ ಚೋಟಾ ರಾಜನ್‌ನೊಂದಿಗೆ ನರೇಂದ್ರ ಮೋದಿ ಇರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಫೋಟೋದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಕೂಡ ಇದ್ದಾರೆ. ಮಹಾರಾಷ್ಟ್ರದಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಚೋಟಾ ರಾಜನ್‌ ಸಹೋದರ ದೀಪಕ್‌ ನಿಖಲ್‌ಜಿ ಕೂಡ ಇದ್ದಾರೆ. ಅದರೊಂದಿಗೆ ಭೂಗತ ಪಾತಕಿ ಸಹೋದರ ಚುನಾವಣೆ ಕಣಕ್ಕೆ ಎಂದು ಬರೆದ ಸುದ್ದಿ ಮಾಧ್ಯಮವೊಂದರ ಸ್ಕ್ರೀನ್‌ಶಾಟ್‌ ಫೋಟೋವನ್ನೂ ಪೋಸ್ಟ್‌ ಮಾಡಲಾಗಿದೆ.

ವಿಜಯ್‌ ಅಕ್ಷಿತ್‌ ಎಂಬ ಹೆಸರಿನ ಟ್ವೀಟರ್‌ ಖಾತೆಯು ಈ ಫೋಟೋವನ್ನು ಪೋಸ್ಟ್‌ ಮಾಡಿ, ‘ಚೋಟಾ ರಾಜನ್‌ನೊಂದಿಗೆ ಮೋದಿ ಮತ್ತು ಫಡ್ನವೀಸ್‌ ಎಂದು ಬರೆಯಲಾಗಿದೆ. ಫೇಸ್‌ಬುಕ್‌ ಮತ್ತು ಟ್ವೀಟರ್‌ನಲ್ಲಿ ಈ ಫೋಟೋ ವೈರಲ್‌ ಆಗುತ್ತಿದೆ.

ಆದರೆ ನಿಜಕ್ಕೂ ಪ್ರಧಾನಿ ನರೇಂದ್ರ ಮೋದಿಗೆ ಚೋಟಾ ರಾಜನ್‌ ಜೊತೆ ಸಂಪರ್ಕ ಇತ್ತೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ, ವೈರಲ್‌ ಆಗಿರುವ ಫೋಟೋವನ್ನು ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ. ಬೂಮ್‌ ಲೈವ್‌ ಸುದ್ದಿಸಂಸ್ಥೆಯು ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಸುದ್ದಿಮಾಧ್ಯಮವೊಂದರಲ್ಲಿ ಮೂಲ ಚಿತ್ರ ಪತ್ತೆಯಾಗಿದೆ.

2014 ಸೆ.25ರಂದು ಪ್ರಕಟವಾಗಿರುವ ಆ ವರದಿಯಲ್ಲಿ 1993ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿ ವಾಪಸಾದ ಮೋದಿ ಅವರನ್ನು ಮೋದಿ ಅವರ ಮಾಜಿ ಸಹಾಯಕ ಸುರೇಶ್‌ ಜಾನಿ ಸ್ವಾಗತಿಸಿ ಬರಮಾಡಿಕೊಂಡರು ಎಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಾನಿ ತಮ್ಮ ಜೊತೆ ಫಡ್ನವೀಸ್‌ ಕೂಡ ಬಂದಿದ್ದರು ಎಂದಿದ್ದಾರೆ. ಆದರೆ ಫೋಟೋದೊಂದಿಗೆ ಚೋಟಾರಾಜನ್‌ ಫೋಟೋವನ್ನು ಸೇರಿಸಿ ಸುಳ್ಳುಸುದ್ದಿ ಹರಡಲಾಗುತ್ತಿದೆ.