ಮಹಾರಾಷ್ಟ್ರದ ಮುಂಬೈ ಮತ್ತು ಗುಜರಾತ್‌ನಲ್ಲಿ ವಿಪರೀತ ಮಳೆಯಾಗುತ್ತಿದೆ. ಅತಿವೃಷ್ಟಿಯಿಂದಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ಥವಾಗಿದೆ. ಹೀಗಿರುವಾಗ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವೈರಲ್‌ ಆಗಿರುವ ಸಂದೇಶ ಹೀಗಿದೆ, ‘ಇದು ಬಾಂಬೆ ಏರ್‌ಪೋರ್ಟ್‌. ಇಲ್ಲಿನ ಸರ್ಕಾರ ಯಾವುದ್ಯಾವುದೂ ಕಾರಣಕ್ಕೆ ಹಣ ಸುರಿಯುತ್ತದೆ. ಆದರೆ ಈ ದ್ವೀಪದಿಂದ ಭೂಮಿಗೆ ಈಜಿಕೊಂಡು ಬರಲಿ ಎಂದು ಭಾವಿಸಿದಂತಿದೆ’ ಎಂದು ಒಕ್ಕಣೆ ಬರೆಯಲಾಗಿದೆ. 26 ಸೆಕೆಂಡ್‌ಗಳಿರುವ ವಿಡಿಯೋದಲ್ಲಿ ವಿಮಾನ ನಿಲ್ದಾಣ ಪೂರ್ತಿ ನೀರಿನಿಂದ ಆವೃತವಾಗಿರುವ ದೃಶ್ಯವಿದೆ. ಆದರೆ ನಿಜಕ್ಕೂ ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಥದ್ದೊಂದು ಸ್ಥಿತಿ ನಿರ್ಮಾಣವಾಗಿದೆಯೇ ಎಂದು ಪರಿಶೀಲಿಸಿದಾಗ ಇದು ಈಗಿನ ವಿಡಿಯೋವೇ ಅಲ್ಲ, 2017ರ ವಿಡಿಯೋ ಎಂದು ತಿಳಿದುಬಂದಿದೆ.

ವೈರಲ್‌ ಆಗಿರುವ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದೊಂದು ನಕಲಿ ವಿಡಿಯೋ ಎಂಬುದಕ್ಕೆ ಹಲವು ಸಾಕ್ಷಿಗಳು ಲಭ್ಯವಾಗುತ್ತವೆ. ವಿಡಿಯೋದಲ್ಲಿ ಕಾಣುವ ವಿಮಾನವೊಂದರ ಮೇಲೆ ಏರ್‌ಫ್ರಾನ್ಸ್‌ ವಿಮಾನಯಾನ ಸಂಸ್ಥೆಯ ಲೋಗೋ ಸ್ಪಷ್ಟವಾಗಿ ಗೋಚರಿಸುತ್ತದೆ.

ಅಲ್ಲದೆ ವೈರಲ್‌ ವಿಡಿಯೋದ ಮೂಲ ವಿಡಿಯೋ ಯುಟ್ಯೂಬ್‌ನಲ್ಲಿ ಲಭ್ಯವಿದ್ದು, ಆಗಸ್ಟ್‌ 31, 2017ರಲ್ಲಿ ಸತತ ಮಳೆ ಸುರಿದ ಪರಿಣಾಮ ಮೆಕ್ಸಿಕೋದ ಬೆನಿಟೋ ಜಾರೇಝ್‌ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ಅನ್ನು 5 ಗಂಟೆ ಮುಚ್ಚಲಾಗಿತ್ತು. ಇದೇ ವಿಡಿಯೋ ಕಳೆದ ವರ್ಷ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು.