ನವದೆಹಲಿ[ಜೂ.07]: ಪಾಯಲ್‌ ರೊಹಟಗಿ ಎಂಬ ಹೆಸರಿನ ಟ್ವೀಟರ್‌ ಖಾತೆಯು ‘ಜಾತ್ಯತೀತ ಭಾರತದಲ್ಲಿ ನಡು ರಸ್ತೆಯಲ್ಲಿಯೇ ನಮಾಜ್‌ ಮಾಡುವುದು ನಿಷೇಧಗೊಳ್ಳಲಿ. ಇಸ್ಲಾಮಿಕ್‌ ರಾಷ್ಟ್ರಗಳಲ್ಲಿಯೇ ಇದಕ್ಕೆ ಅವಕಾಶವಿಲ್ಲದಿರುವಾಗ ನಮ್ಮಲ್ಲಿ ಏಕೆ ಅವಕಾಶ ನೀಡಬೇಕು?’ ಎಂಬ ಒಕ್ಕಣೆ ಬರೆದು ಸಾವಿರಾರು ಮುಸ್ಲಿಮರು ಒಟ್ಟಿಗೇ ನಮಾಜ್‌ ಮಾಡುತ್ತಿರುವ ಫೋಟೋವನ್ನು ಪೋಸ್ಟ್‌ ಮಾಡಲಾಗಿದೆ.

ಒಂದು ವಾರದ ಮುಂಚೆ ಕೂಡ ಇದೇ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಅದರೊಂದಿಗೆ ‘ಇಸ್ಲಾಮಿಕ್‌ ರಾಷ್ಟ್ರಗಳಲ್ಲಿ ತಪ್ಪಾಗಿದ್ದು, ನಮ್ಮ ದೇಶದಲ್ಲಿ ಹೇಗೆ ಸರಿ ಎಂದೆನಿಸಿಕೊಳ್ಳುತ್ತದೆ. ರಸ್ತೆಯಲ್ಲಿ ನಮಾಜ್‌ ಮಾಡುವುದು ಇಸ್ಲಾಮಿಕ್‌ ರಾಷ್ಟ್ರಗಳಲ್ಲಿ ನಿಷೇಧಗೊಂಡಿದೆ, ಭಾರತದಲ್ಲೇಕೆ ನಿಷೇಧ ಮಾಡಿಲ್ಲ? ನಾವೇಕೆ ಗುಲಾಮರಂತೆ ಆಡುತ್ತಿದ್ದೇವೆ?’ ಎಂದು ಒಕ್ಕಣೆ ಬರೆಯಲಾಗಿತ್ತು. ಈ ಫೋಟೋವನ್ನು ‘ಐ ಸಪೋರ್ಟ್‌ ನರೇಂದ್ರ ಮೋದಿ’ ಪೇಜ್‌ ಕೂಡ ಶೇರ್‌ ಮಾಡಿದೆ.

ಆದರೆ ಈ ಬಗ್ಗೆ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ವೆಬ್‌ಸೈಟ್‌ವೊಂದರಲ್ಲಿ ಇದೇ ಫೋಟೋ ಪ್ರಕಟವಾಗಿತ್ತು. ಅದರಲ್ಲಿ ಬಾಂಗ್ಲಾದೇಶದ ಬಿಶಾವ್‌ ಇಜ್‌ತೆಮಾ ಬಳಿ ಅಪಾರ ಸಂಖ್ಯೆ ಮುಸ್ಲಿಮರು ನೆರೆದಿದ್ದ ಕಾರಣ ರಸ್ತೆಯಲ್ಲೇ ನಮಾಜು ಮಾಡಬೇಕಾಯಿತು ಎಂದು ಬರೆಯಲಾಗಿದೆ.

ಅಂತರ್ಜಾಲದಲ್ಲಿ ಈ ಬಗ್ಗೆ ಸಾಕಷ್ಟುಮಾಹಿತಿಯೂ ಲಭ್ಯವಾಗುತ್ತದೆ. ಹಾಗಾಗಿ ಇದೊಂದು ಭಾರತದ್ದಲ್ಲ ಬಾಂಗ್ಲಾ ದೇಶದ ಫೋಟೋ ಎಂಬುದು ಸ್ಪಷ್ಟ.