ರಕ್ತದಾನಿಗಳ ಮಾಹಿತಿ ಕೊಡುವ ಸಾಕಷ್ಟು ಆ್ಯಪ್'ಗಳು ಭಾರತದಲ್ಲಿವೆ. ಆದರೆ, ಅವುಗಳ ರೀಚ್ ಅಷ್ಟಕಷ್ಟೇ ಇದೆ. ರಕ್ತದಾನ ಮಾಡಲು ಜನರು ಸಿದ್ಧರಿದ್ದಾರಾದರೂ ಅವರಿಗೆ ಸಮರ್ಪಕ ವ್ಯವಸ್ಥೆಯ ಕೊರತೆ ಇದೆ. ಭಾರತದಲ್ಲಿ 24 ಕೋಟಿ ಬಳಕೆದಾರರಿರುವ ಫೇಸ್ಬುಕ್'ನಿಂದ ಇಂಥದ್ದೊಂದು ಫೀಚರ್ ಬರುತ್ತಿರುವುದು ಸ್ವಾಗತಾರ್ಹ.

ಬೆಂಗಳೂರು(ಸೆ. 29): ತುರ್ತು ಸಂದರ್ಭದಲ್ಲಿ ರಕ್ತಕ್ಕಾಗಿ ನಾವು ಪರದಾಡುವುದು ಸಾಮಾನ್ಯವಾಗಿದೆ. ಬ್ಲಡ್'ಬ್ಯಾಂಕ್'ಗಳಲ್ಲಿ ಹಲವು ಬಾರಿ ಸ್ಟಾಕ್'ಗಳೇ ಇರುವುದಿಲ್ಲ. ರಕ್ತದಾನಿಗಳನ್ನು ಹುಡುಕುವುದರಲ್ಲಿ ಹೈರಾಣವಾಗಿ ಹೋಗುತ್ತೇವೆ. ಈ ಹಿನ್ನೆಲೆಯಲ್ಲಿ ಫೇಸ್ಬುಕ್ ಈ ಸಮಸ್ಯೆ ನಿವಾರಿಸುವ ಪ್ರಯತ್ನ ಆರಂಭಿಸುತ್ತಿದೆ. ರಕ್ತದ ಅಗತ್ಯವಿರುವವರು ಮತ್ತು ರಕ್ತದಾನಿಗಳನ್ನು ಲಿಂಕ್ ಮಾಡುವ ಒಂದು ಹೊಸ ಫೀಚರ್'ನ್ನು ಫೇಸ್ಬುಕ್ ಸಿದ್ಧಗೊಳಿಸಿದೆ. ಅಂತಾರಾಷ್ಟ್ರೀಯ ರಕ್ತ ದಾನ ದಿನವಾದ ಅಕ್ಟೋಬರ್ 1ರಂದು ಫೇಸ್ಬುಕ್'ನ ಈ ಹೊಸ ಫೀಚರ್ ಚಾಲನೆಗೆ ಬರಲಿದೆ.

ಹೇಗೆ ಕೆಲಸ ಮಾಡುತ್ತದೆ?
ಹೊಸ ಫೀಚರ್ ಚಾಲನೆಗೆ ಬಂದ ಬಳಿಕ ಫೇಸ್ಬುಕ್ ಬಳಕೆದಾರರಿಗೆ ರಕ್ತದಾನದ ಕುರಿತು ಮೆಸೇಜ್ ಹೋಗುತ್ತದೆ. ರಕ್ತದಾನ ಮಾಡಲು ಇಚ್ಛಿಸುವವರು ರಕ್ತದಾನಿಗಳೆಂದು ಫೇಸ್ಬುಕ್'ನಲ್ಲೇ ರಿಜಿಸ್ಟರ್ ಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ಸಾರ್ವಜನಿಕವಾಗಿರಿಸಿಕೊಳ್ಳುವ ಅಥವಾ ಖಾಸಗಿಯಾಗಿಟ್ಟುಕೊಳ್ಳುವ ಆಯ್ಕೆ ಎಲ್ಲರಿಗೂ ಇರುತ್ತದೆ. ಇಲ್ಲಿಗೆ ರಕ್ತದಾನಿಗಳ ಡೇಟಾ ಸಿದ್ಧವಾಗಿರುತ್ತದೆ. ರಕ್ತದ ಅಗತ್ಯವಿರುವವರು ರಕ್ತದ ಕೋರಿಕೆ ಮಾಡಿ ಪೋಸ್ಟ್ ಹಾಕಬಹುದು. ಇದರಿಂದ ಎಲ್ಲಾ ರಕ್ತದಾನಿಗಳಿಗೆ ನೋಟಿಫಿಕೇಶನ್ ಹೋಗುತ್ತದೆ. ಆಗ, ರಕ್ತದಾನಿಗಳು ಫೇಸ್ಬುಕ್, ಮೆಸೆಂಜರ್ ಅಥವಾ ವಾಟ್ಸಾಪ್ ಮೂಲಕ ರಕ್ತದ ಅಗತ್ಯವಿದ್ದವರನ್ನು ಸಂಪರ್ಕಿಸಬಹುದಾಗಿದೆ.

ರಕ್ತದಾನಿಗಳ ಮಾಹಿತಿ ಕೊಡುವ ಸಾಕಷ್ಟು ಆ್ಯಪ್'ಗಳು ಭಾರತದಲ್ಲಿವೆ. ಆದರೆ, ಅವುಗಳ ರೀಚ್ ಅಷ್ಟಕಷ್ಟೇ ಇದೆ. ರಕ್ತದಾನ ಮಾಡಲು ಜನರು ಸಿದ್ಧರಿದ್ದಾರಾದರೂ ಅವರಿಗೆ ಸಮರ್ಪಕ ವ್ಯವಸ್ಥೆಯ ಕೊರತೆ ಇದೆ. ಭಾರತದಲ್ಲಿ 24 ಕೋಟಿ ಬಳಕೆದಾರರಿರುವ ಫೇಸ್ಬುಕ್'ನಿಂದ ಇಂಥದ್ದೊಂದು ಫೀಚರ್ ಬರುತ್ತಿರುವುದು ಸ್ವಾಗತಾರ್ಹ.

ಭಾರತೀಯನಿಂದ ಅಭಿವೃದ್ಧಿ:
ಫೇಸ್ಬುಕ್'ನ ಹೊಸ ರಕ್ತದಾನ ಫೀಚರ್'ನ್ನು ಡೆವಲಪ್ ಮಾಡಿದ್ದು ಹೇಮಾ ಬುದರಾಜು ಎಂಬ ಭಾರತೀಯ ಮಹಿಳೆ. ಐದು ವರ್ಷದ ಹಿಂದೆ ಈಕೆಯ ತಂದೆಗೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಅವರ ಚಿಕಿತ್ಸೆಯ ವೇಳೆ ಪ್ರತೀ ವಾರವೂ ರಕ್ತದ ಅಗತ್ಯವಿರುತ್ತಿತ್ತು. ಆಗ ರಕ್ತದಾನಿಗಳನ್ನು ಹುಡುಕುವುದು ಎಷ್ಟು ಕಷ್ಟಕರ ಕೆಲಸವೆಂಬ ಸತ್ಯ ಹೇಮಾಗೆ ಅರಿವಾಗುತ್ತದೆ. ಆ್ಯಪ್ ಡೆಲವಪರ್ ಆಗಿರುವ ಹೇಮಾ ಅವರು ಫೇಸ್ಬುಕ್'ಗಾಗಿ ಇಂಥದ್ದೊಂದು ಹೊಸ ಫೀಚರ್'ನ್ನು ಅಭಿವೃದ್ಧಿಪಡಿಸಿದ್ದಾರೆ.

ರಕ್ತದಾನದ ಫೀಚರ್ ಅಭಿವೃದ್ಧಿಪಡಿಸಿದ ಹೇಮಾ ಬುದರಾಜು ಅವರ ಕೊಡುಗೆಯನ್ನು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್'ಬರ್ಗ್ ಅವರೇ ಸ್ವತಃ ಶ್ಲಾಘಿಸಿದ್ದಾರೆ. ಸಹಾಯ ಮಾಡಲು ಜನರು ಸಿದ್ಧರಿದ್ದಾರಾದರೂ ಅವರಿಗೆ ಮಾಹಿತಿಯ ಕೊರತೆ ಇದೆ. ಇದನ್ನು ಸರಿದೂಗಿಸಲು ಫೇಸ್ಬುಕ್ ಪ್ರಯತ್ನಿಸಿದೆ ಎಂದು ಮಾರ್ಕ್ ಹೇಳಿದ್ದಾರೆ. "ಭಾರತದಲ್ಲಿ ರಕ್ತದಾನಿಗಳ ನೆರವು ಕೋರಿ ಸಾವಿರಾರು ಪೋಸ್ಟ್'ಗಳು ಬರುತ್ತವೆ. ಪ್ರತಿಯೊಬ್ಬರಿಗೂ ಸುರಕ್ಷಿತವಾದ ರಕ್ತ ಲಭ್ಯವಾಗುವಷ್ಟು ರಕ್ತದಾನಿಗಳು ಭಾರತದಲ್ಲಿ ಸಿಗುತ್ತಿಲ್ಲ," ಎಂದು ಫೇಸ್ಬುಕ್ ಸಂಸ್ಥಾಪಕರು ಅಭಿಪ್ರಾಯಪಟ್ಟಿದ್ದಾರೆ.