ಫೇಸ್‌ಬುಕ್‌ ಲೀಕ್‌ ಖಚಿತ! ಜಗತ್ತಿನ 8.7 ಕೋಟಿ ಬಳಕೆದಾರರ ವಿವರ ಸೋರಿಕೆ

Facebook Information Leak
Highlights

ಫೇಸ್‌ಬುಕ್‌ ಮಾಹಿತಿ ಸೋರಿಕೆ ಹಗರಣದ ಕುರಿತು ಕೊನೆಗೂ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್‌ ಅಧಿಕೃತ ಅಂಕಿಅಂಶ ಒದಗಿಸಿದ್ದು, ಜಗತ್ತಿನಾದ್ಯಂತ ಒಟ್ಟಾರೆ 8.7 ಕೋಟಿ ಜನರ ಮಾಹಿತಿ ಸೋರಿಕೆಯಾಗಿರಬಹುದು ಎಂದು ತಿಳಿಸಿದ್ದಾರೆ. 

ವಾಷಿಂಗ್ಟನ್‌/ ನವದೆಹಲಿ : ಫೇಸ್‌ಬುಕ್‌ ಮಾಹಿತಿ ಸೋರಿಕೆ ಹಗರಣದ ಕುರಿತು ಕೊನೆಗೂ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್‌ ಅಧಿಕೃತ ಅಂಕಿಅಂಶ ಒದಗಿಸಿದ್ದು, ಜಗತ್ತಿನಾದ್ಯಂತ ಒಟ್ಟಾರೆ 8.7 ಕೋಟಿ ಜನರ ಮಾಹಿತಿ ಸೋರಿಕೆಯಾಗಿರಬಹುದು ಎಂದು ತಿಳಿಸಿದ್ದಾರೆ. ಇದರಲ್ಲಿ ಭಾರತದ 5.6 ಲಕ್ಷ ಫೇಸ್‌ಬುಕ್‌ ಬಳಕೆದಾರರ ಮಾಹಿತಿಯೂ ಸೇರಿದೆ ಎಂದು ಫೇಸ್‌ಬುಕ್‌ ಕಂಪನಿಯ ಭಾರತದ ವಕ್ತಾರರು ಹೇಳಿದ್ದಾರೆ.

ಅಮೆರಿಕದ ಚುನಾವಣೆಯ ವೇಳೆ ಪ್ರಚಾರದ ಉದ್ದೇಶಕ್ಕಾಗಿ ಹಾಗೂ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ವಿವಿಧ ಸಮಯದಲ್ಲಿ ಕೇಂಬ್ರಿಜ್‌ ಅನಾಲಿಟಿಕಾ ಎಂಬ ಕಂಪನಿ ಫೇಸ್‌ಬುಕ್‌ ಬಳಕೆದಾರರ ಮಾಹಿತಿಯನ್ನು ಕದ್ದಿದೆ ಎಂಬ ಸಂಗತಿ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದಕ್ಕೆ ಕ್ಷಮೆಯಾಚಿಸಿದ್ದ ಫೇಸ್‌ಬುಕ್‌, ಒಟ್ಟಾರೆ 5 ಕೋಟಿ ಜನರ ಮಾಹಿತಿ ಸೋರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಕಳೆದ ವಾರ ಹೇಳಿತ್ತು. ಆದರೆ, ಜಗತ್ತಿನಾದ್ಯಂತ 8.7 ಕೋಟಿ ಜನರ ಮಾಹಿತಿ ಸೋರಿಕೆಯಾಗಿರಬಹುದು ಎಂದು ಹೆಚ್ಚಿನ ಪರಿಶೀಲನೆಯ ನಂತರ ಮಾರ್ಕ್ ಜುಕರ್‌ಬರ್ಗ್‌ ಇದೀಗ ತಿಳಿಸಿದ್ದು, ಇದರಲ್ಲಿ ಅಮೆರಿಕನ್ನರೇ ಹೆಚ್ಚಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ 335 ಫೇಸ್‌ಬುಕ್‌ ಬಳಕೆದಾರರು ಮಾಹಿತಿ ಸೋರಿಕೆಗೆ ಕಾರಣವಾದ ಆ್ಯಪ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಂಡಿದ್ದು, ಅವರ ಮಾಹಿತಿ ನೇರವಾಗಿ ಸೋರಿಕೆಯಾಗಿದೆ. ಇನ್ನು ಇವರಿಗೆ 5,62,120 ಸ್ನೇಹಿತರಿದ್ದು, ಅವರ ಮಾಹಿತಿಯೂ ಸೋರಿಕೆಯಾಗಿರಬಹುದು. ಅಲ್ಲಿಗೆ ಭಾರತದಲ್ಲಿ ಒಟ್ಟಾರೆ 5,62,455 ಜನರು ಮಾಹಿತಿ ಸೋರಿಕೆ ಹಗರಣದ ಸಂತ್ರಸ್ತರಾಗಿರುವ ಸಾಧ್ಯತೆಯಿದೆ ಎಂದು ಭಾರತದ ಫೇಸ್‌ಬುಕ್‌ ವಕ್ತಾರರು ತಿಳಿಸಿದ್ದಾರೆ.

ಭಾರತೀಯ ಬಳಕೆದಾರರೂ ಸೇರಿದಂತೆ ಜಗತ್ತಿನಾದ್ಯಂತ ಎಲ್ಲ ಫೇಸ್‌ಬುಕ್‌ ಬಳಕೆದಾರರಲ್ಲಿ ಯಾರಾರ‍ಯರ ಮಾಹಿತಿ ಸೋರಿಕೆಯಾಗಿದೆ ಎಂಬ ಮಾಹಿತಿಯಿದೆಯೋ ಅವರೆಲ್ಲರ ಖಾತೆಗಳನ್ನು ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ನನಗೊಂದು ಚಾನ್ಸ್‌ ಕೊಡಿ: ಮಾಹಿತಿ ಸೋರಿಕೆ ಕುರಿತು ಅಮೆರಿಕದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಫೇಸ್‌ಬುಕ್‌ ಸಿಇಒ ಮಾರ್ಕ್ ಜುಕರ್‌ಬರ್ಗ್‌, ನನ್ನಿಂದ ತಪ್ಪಾಗಿದೆ. ಇದು ದೊಡ್ಡ ತಪ್ಪು. ಇದರಿಂದ ಫೇಸ್‌ಬುಕ್‌ ಬಳಕೆದಾರರಿಗೆ ಅನ್ಯಾಯವಾಗಿದೆ. ಇದಕ್ಕಾಗಿ ನಾನು ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ. ನನಗೆ ಇನ್ನೊಂದು ಅವಕಾಶ ಕೊಡಿ. ಇದನ್ನೆಲ್ಲ ಸರಿಪಡಿಸಿಕೊಳ್ಳುತ್ತೇವೆ. ಮುಂದಿನ ವಾರ ಅಮೆರಿಕದ ಸಂಸದೀಯ ಸಮಿತಿಗೆ ಈ ಹಗರಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.

ಫೇಸ್‌ಬುಕ್‌ ನಿರ್ದೇಶಕ ಮಂಡಳಿಯಿಂದ ನಿಮ್ಮನ್ನು ಕಿತ್ತುಹಾಕಲಾಗುತ್ತಿದೆಯಂತೆ ಎಂಬ ಪ್ರಶ್ನೆಗೆ, ಅಂತಹ ಯಾವುದೇ ಮಾಹಿತಿ ನನಗಿಲ್ಲ. ಯಾರೂ ರಾಜೀನಾಮೆ ನೀಡುವಂತೆ ನನ್ನನ್ನು ಕೇಳಿಲ್ಲ. ನಾನೂ ಕೂಡ ಈ ಹಗರಣಕ್ಕೆ ಸಂಬಂಧಪಟ್ಟಂತೆ ಯಾರನ್ನೂ ಕಂಪನಿಯಿಂದ ತೆಗೆದುಹಾಕಿಲ್ಲ ಎಂದು ತಿಳಿಸಿದರು.

ಮೆಸೆಂಜರ್‌ ಕೂಡ ಕದ್ದು ನೋಡುತ್ತಂತೆ ಫೇಸ್‌ಬುಕ್‌!

ವಾಷಿಂಗ್ಟನ್‌: ಫೇಸ್‌ಬುಕ್‌ನ ಮೆಸೆಂಜರ್‌ ಆ್ಯಪ್‌ನಲ್ಲಿ ಇಬ್ಬರು ಖಾಸಗಿ ವ್ಯಕ್ತಿಗಳು ನಡೆಸುವ ಸಂಭಾಷಣೆಯನ್ನು ಕೂಡ ಫೇಸ್‌ಬುಕ್‌ ಕಂಪನಿ ಸ್ಕ್ಯಾನ್‌ ಮಾಡುತ್ತದೆ ಎಂಬ ಸಂಗತಿ ಹೊರಬಿದ್ದಿದೆ. ಇದು ಇತ್ತೀಚೆಗಷ್ಟೇ ಮಾಹಿತಿ ಸೋರಿಕೆ ಹಗರಣದಿಂದ ವಿವಾದಕ್ಕೀಡಾಗಿರುವ ಕಂಪನಿಯ ಬಗ್ಗೆ ಇನ್ನಷ್ಟುಜನಾಕ್ರೋಶ ಹುಟ್ಟಿಸುವ ಸಾಧ್ಯತೆಯಿದೆ.

loader