ನವದೆಹಲಿ(ಡಿ.12): ಐದು ರಾಜ್ಯಗಳ ಚುನಾವಣೆಯಲ್ಲಿ ಇಂಥದ್ದೇ ಪಕ್ಷ ಅಧಿಕಾರಕ್ಕೆ ಬರಬಹುದು ಎಂದು ಭವಿಷ್ಯ ನುಡಿದಿದ್ದ ಮಾಧ್ಯಮ ಹಾಗೂ ಸಮೀಕ್ಷಾ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಗಳು ಅರ್ಧಸತ್ಯವಾಗಿ ಹೊರಹೊಮ್ಮಿವೆ.

- ಮಿಜೋರಂ, ಛತ್ತೀಸ್‌ಗಢ ಹಾಗೂ ತೆಲಂಗಾಣ ವಿಚಾರದಲ್ಲಿ ವಾಹಿನಿಗಳು ನಡೆಸಿದ ಸಮೀಕ್ಷೆ ಹೆಚ್ಚೂ ಕಮ್ಮಿ ಹುಸಿಯಾಗಿದೆ. ಮಿಜೋರಂಗೆ ಸಂಬಂಧಿಸಿದಂತೆ ನಡೆದಿದ್ದ ಎರಡೂ ಸಮೀಕ್ಷೆಗಳು ಸುಳ್ಳಾಗಿವೆ. ಈ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿದ್ದವು. ಆದರೆ ಮಿಜೋರಂನಲ್ಲಿ ಎಂಎನ್‌ಎಫ್‌ ಸ್ಪಷ್ಟಬಹುಮತ ಪಡೆದಿದೆ.

ಮತದಾನೋತ್ತರ ಸಮೀಕ್ಷೆ : ಯಾರಿಗೆ ರಾಜ ‘ಸ್ಥಾನ’?

- ಇನ್ನು ತೆಲಂಗಾಣ ವಿಚಾರಕ್ಕೆ ಬಂದರೆ, 7 ಸಮೀಕ್ಷೆಗಳಲ್ಲಿ ಟೀವಿ9 ತೆಲುಗು ಹಾಗೂ ಇಂಡಿಯಾ ಟುಡೇ ಮತದಾನೋತ್ತರ ಸಮೀಕ್ಷೆಗಳು ಮಾತ್ರ ನಿಜವಾಗಿದ್ದು, ಮಿಕ್ಕ 5 ಸಮೀಕ್ಷೆಗಳು ಹುಸಿಯಾಗಿವೆ. ಟೀವಿ9 ತೆಲುಗು ವಾಹಿನಿಯು ತೆಲಂಗಾಣ ರಾಷ್ಟ್ರ ಸಮಿತಿಗೆ 75-85 ಹಾಗೂ ಕಾಂಗ್ರೆಸ್‌ಗೆಗೆ 25ರಿಂದ 30 ಸೀಟು ಅಂದಾಜಿಸಿತ್ತು. ಇನ್ನು ಇಂಡಿಯಾ ಟುಡೇ ಟಿಆರ್‌ಎಸ್‌ಗೆ 79-91 ಹಾಗೂ ಕಾಂಗ್ರೆಸ್‌ಗೆ 21-33 ಸೀಟು ಬರಬಹುದು ಎಂದಿತ್ತು. ಈ ಸಮೀಕ್ಷೆಗಳು ಫಲಿತಾಂಶಕ್ಕೆ ಹತ್ತಿರವಾಗಿದ್ದು, ತೆಲಂಗಾಣ ರಾಷ್ಟ್ರ ಸಮಿತಿ 80ಕ್ಕೂ ಹೆಚ್ಚು ಸ್ಥಾನದಲ್ಲಿ ಗೆದ್ದರೆ ಕಾಂಗ್ರೆಸ್‌ ಸುಮಾರು 20ರ ಆಸುಪಾಸಿಗೆ ತೃಪ್ತಿ ತಂದುಕೊಟ್ಟಿದೆ.

- ಛತ್ತೀಸ್‌ಗಢಕ್ಕೆ ಸಂಬಂಧಿಸಿದಂತೆ 7 ವಾಹಿನಿಗಳು ಸಮೀಕ್ಷೆ ಮಾಡಿದ್ದವು. ಇದರಲ್ಲಿ ಕಾಂಗ್ರೆಸ್‌ಗೆ ಬಹುಮತ ಬರಬಹುದು ಎಂಬ ಸಮೀಕ್ಷೆ ನುಡಿದ ಸಂಸ್ಥೆಗಳೆಂದರೆ ರಿಪಬ್ಲಿಕ್‌ ಟೀವಿ-ಸಿವೋಟರ್‌ ಹಾಗೂ ಚಾಣಕ್ಯ ಮಾತ್ರ. ಆದರೆ ಇವೂ ಕಾಂಗ್ರೆಸ್‌ 50 ಸ್ಥಾನದವರೆಗೆ ಗೆಲ್ಲಬಹುದು ಎಂದು ನಿರೀಕ್ಷೆ ಮಾಡಿದ್ದವು. ಈ ಸಮೀಕ್ಷೆಗಳನ್ನು ಮೀರಿ ಕಾಂಗ್ರೆಸ್‌ 60ಕ್ಕೂ ಹೆಚ್ಚು ಸ್ಥಾನ ಗೆದ್ದಿದೆ. ಈ ಮೂಲಕ ಸಮೀಕ್ಷೆಗಳೆಲ್ಲ ಬಹುತೇಕ ಸುಳ್ಳಾಗಿವೆ.

ಪಂಚ ಫಲಿತಾಂಶ: ಯಾರ್ಯಾರಿಗೆ ಎಷ್ಟೆಷ್ಟು?..ಸಂಪೂರ್ಣ ವಿವರ

- ಆದರೆ ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಬಗ್ಗೆ ಬಹುತೇಕ ಸಂಸ್ಥೆಗಳು ಮುನ್ಸೂಚನೆ ನೀಡಿದ್ದವು. ಇದು ವಾಸ್ತವಕ್ಕೆ ಹತ್ತಿರವಾದಂತೆ ಗೋಚರಿಸುತ್ತಿದೆ. ರಾಜಸ್ಥಾನದಲ್ಲಿ 7ರಲ್ಲಿ 6 ಸಮೀಕ್ಷೆಗಳು ಕಾಂಗ್ರೆಸ್‌ ಗೆಲ್ಲುತ್ತದೆ ಎಂದು ಹೇಳಿದ್ದವು. ಇದು ಸತ್ಯವಾಗಿದೆ. ಆದರೆ ಈ 6 ಸಮೀಕ್ಷೆಗಳಲ್ಲಿ ಇಂಡಿಯಾ ಟುಡೇ ಸಮೀಕ್ಷೆ 141 ಸ್ಥಾನ ಬರಹುದು ಎಂದಿತ್ತು. ಅಷ್ಟುಸ್ಥಾನಗಳು ಕಾಂಗ್ರೆಸ್‌ಗೆ ಲಭಿಸಿಲ್ಲ.

- ಮಧ್ಯಪ್ರದೇಶದಲ್ಲಿ ಸಮೀಕ್ಷೆ ನಡೆಸಿದ 7 ಸಂಸ್ಥೆಗಳು ಫೋಟೋಫಿನಿಶ್‌ ಸ್ಪರ್ಧೆ ಇರಬಹುದು ಎಂದು ಅಂದಾಜಿಸಿದ್ದವು. ಇದರಲ್ಲಿ ರಿಪಬ್ಲಿಕ್‌ ಜನ್‌ ಕೀ ಬಾತ್‌, ಇಂಡಿಯಾ ನ್ಯೂಸ್‌ ಚಾನೆಲ್‌ಗಳು ಬಿಜೆಪಿಗೆ ಕ್ರಮವಾಗಿ 108 ಹಾಗೂ 106 ಸ್ಥಾನ ಬರಬಹುದು ಎಂದಿದ್ದವು. ಕಾಂಗ್ರೆಸ್‌ಗೆ 112 ಸ್ಥಾನಗಳನ್ನು ಎರಡೂ ಸಮೀಕ್ಷೆಗಳು ನೀಡಿದ್ದವು. ಇದು ವಾಸ್ತವಕ್ಕೆ ಹತ್ತಿರವಾಗಿದೆ. ಇಂಡಿಯಾ ಟುಡೇ ಕಾಂಗ್ರೆಸ್‌ಗೆ 122ರವರೆಗೆ, ರಿಪಬ್ಲಿಕ್‌-ಸಿವೋಟರ್‌ 110-126 ಹಾಗೂ ಚಾಣಕ್ಯ 125 ಸೀಟು ಬರಬಹುದು ಎಂದಿದ್ದವು. ಅಷ್ಟುಬಂದಿಲ್ಲ.

ಬಿಜೆಪಿ ಮಧ್ಯಪ್ರದೇಶದಲ್ಲಿ 126 ಸ್ಥಾನ ಗಳಿಸಲಿದೆ ಎಂದು ಟೈಮ್ಸ್‌ ನೌ ಹೇಳಿತ್ತು. ಇದು ಸಂಪೂರ್ಣ ಹುಸಿಯಾಗಿದೆ.