ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾಗೆ ತೀವ್ರ ಹಿನ್ನಡೆಯಾಗಿದ್ದು, ಐದು ವರ್ಷ ಕಠಿಣ ಜೈಲು ಶಿಕ್ಷೆ ಘೋಷಣೆಯಾಗಿದೆ.

ಢಾಕಾ: ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾಗೆ ತೀವ್ರ ಹಿನ್ನಡೆಯಾಗಿದ್ದು, ಐದು ವರ್ಷ ಕಠಿಣ ಜೈಲು ಶಿಕ್ಷೆ ಘೋಷಣೆಯಾಗಿದೆ.

ಮೂರು ಬಾರಿ ಪ್ರಧಾನಿಯಾಗಿದ್ದ ಜಿಯಾ ವಿರುದ್ಧ ಢಾಕಾದ ವಿಶೇಷ ಕೋರ್ಟ್‌ ಈ ತೀರ್ಪು ನೀಡಿದೆ. ಈ ತೀರ್ಪಿನಿಂದಾಗಿ ಮುಂದಿನ ಡಿಸೆಂಬರ್‌ನಲ್ಲಿ ನಡೆಯಲಿರುವ ಸಂಸತ್‌ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಜಿಯಾ ಕೈತಪ್ಪುವ ಸಾಧ್ಯತೆ ಇದೆ. ಜಿಯಾ ಅವರ ಕುಟುಂಬ ನಿರ್ವಹಿಸುವ ಅನಾಥಾಶ್ರಮ ಟ್ರಸ್ಟ್ ಪಡೆದ ವಿದೇಶಿ ದೇಣಿಗೆಯೊಂದರ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತೀರ್ಪು ಹೊರಬಿದ್ದಿದೆ.

ಜಿಯಾರ ದೇಶ ಭ್ರಷ್ಟ ಹಿರಿಯ ಮಗ, ಬಾಂಗ್ಲಾದೇಶ್‌ ನ್ಯಾಶನಲ್‌ ಪಾರ್ಟಿಯ ಹಿರಿಯ ಉಪಾಧ್ಯಕ್ಷ ತಾರಿಖ್‌ ರಹ್ಮಾನ್‌ ಮತ್ತು ಇತರ ನಾಲ್ವರಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಜಿಯಾರ ಆರೋಗ್ಯ ಸಮಸ್ಯೆ ಮತ್ತು ಸಾಮಾಜಿಕ ಘನತೆಯನ್ನು ಪರಿಗಣಿಸಿ ಶಿಕ್ಷೆಯ ಅವಧಿ ಕಡಿತ ಮಾಡಲಾಗಿದೆ ಎಂದು ನ್ಯಾಯಾಧೀಶ ಮೊಹಮ್ಮದ್‌ ಅಖ್ತರುಜ್ಜಾಮನ್‌ ನ್ಯಾಯಪೀಠ ತಿಳಿಸಿದೆ.