ಜುಲ್ವಾ(ಆ.23): 2022ಕ್ಕೆ ದೇಶ 75 ನೇ ಸ್ವಾತಂತ್ರ್ಯೋತ್ಸವ ಆಚರಿಸಲಿದ್ದು, ಅಷ್ಟರೊಳಗೆ  ದೇಶದ  ಪ್ರತಿಯೊಂದು ಕುಟುಂಬಗಳು ಸ್ವಂತ ಮನೆ ಹೊಂದುವುದು ತಮ್ಮ ಕನಸು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತಿನ ವಾಲ್ಸಾಡದ ಜುಜ್ವಾದಲ್ಲಿಂದು  ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳೊಂದಿಗೆ  ವಿಡಿಯೋ  ಸಂವಾದ ನಡೆಸಿದ ಬಳಿಕ ಮಾತನಾಡಿದ ಮೋದಿ, ಈ ಯೋಜನೆಯಡಿ ಅತ್ಯುತ್ತಮ ಗುಣಮಟ್ಟದ ಮನೆಗಳನ್ನು ಕಟ್ಟಬಹುದಾಗಿದೆ ಎಂದು ಹೇಳಿದರು. ಕಾನೂನು ಬದ್ದವಾಗಿ ಮನೆ ಪಡೆಯುತ್ತಿರುವ ಬಗ್ಗೆ ಎಲ್ಲರೂ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯಲ್ಲಿ ಅವರು ನಯಾಪೈಸೆ ಲಂಚವನ್ನು ನೀಡಿಲ್ಲ ಎಂದು ಮೋದಿ ಹೇಳಿದರು.

ಎಲ್ಲರಿಗೂ ಮನೆ ಒದಗಿಸುವ ಗುರಿಯೊಂದಿಗೆ  ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಡಿ ಗುಜರಾತ್ ರಾಜ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ ಎಂದು  ಪ್ರಧಾನಿ ತಿಳಿಸಿದರು.

ಇಂದು ಬೆಳಗ್ಗೆ ಗುಜರಾತಿಗೆ  ಭೇಟಿ ನೀಡಿದ ಪ್ರಧಾನಿ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಗುಜರಾತಿನ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭ ಹಾಗೂ ಮೋದಿ ರಾಜಭವನದಲ್ಲಿ ಸೋಮನಾಥ ದೇವಾಲಯ ಟ್ರಸ್ಟ್ ಸಭೆಯಲ್ಲಿ ಪಾಲ್ಗೊಂಡಿದ್ದರು.