ನವದೆಹಲಿ[ಮಾ.13]: ಕಳೆದ ಐದು ತಿಂಗಳ ಅವಧಿಯಲ್ಲಿ ಒಟ್ಟಾರೆ 300ಕ್ಕೂ ಹೆಚ್ಚು ಮಂದಿ ವಿಮಾನ ಪ್ರಯಾಣಿಕರನ್ನು ಬಲಿಪಡೆದ ಅಮೆರಿಕದ ಬೋಯಿಂಗ್‌ ಕಂಪನಿಯ 737 ಮ್ಯಾಕ್ಸ್‌-8 ಸರಣಿಯ ವಿಮಾನಗಳ ಸಂಚಾರದ ಕೆಲ ದೇಶಗಳು ನಿಷೇಧ ಹೇರಿದ ಬೆನ್ನಲ್ಲೇ, ಈ ವಿಮಾನ ಹಾರಾಟದ ಮೇಲೆ ಭಾರತ ಸರ್ಕಾರವು ನಿಷೇಧ ಹೇರಿದೆ.

ಈ ಬಗ್ಗೆ ಮಂಗಳವಾರ ಪ್ರಕಟಣೆ ಹೊರಡಿಸಿದ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ, ‘ನಾವು ಯಾವಾಗಲೂ ಪ್ರಯಾಣಿಕರ ಸುರಕ್ಷತೆಯ ಸಂಚಾರಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತೇವೆ. ಹಾಗಾಗಿ, ಬೋಯಿಂಗ್‌ 737 ಮ್ಯಾಕ್ಸ್‌-8 ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇವುಗಳು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುವಂತೆ ಆಧುನಿಕರಣಗೊಳಿಸುವವರೆಗೂ ಹಾರಾಟಕ್ಕೆ ಅವಕಾಶ ನೀಡುವುದಿಲ್ಲ,’ ಎಂದು ಹೇಳಿದೆ.

ಭಾರತದಲ್ಲಿ ಸ್ಪೈಸ್‌ ಜೆಟ್‌ ಬಳಿ ಬೋಯಿಂಗ್‌ ಕಂಪನಿಯ 12 ಮತ್ತು ಜೆಟ್‌ ಏರ್‌ವೇಸ್‌ ಬಳಿ 5 ವಿಮಾನಗಳಿವೆ. ಇದೇ ವೇಳೆ ಜರ್ಮನಿ, ಮಲೇಷ್ಯಾ, ಅರ್ಜೆಂಟೀನಾ, ದಕ್ಷಿಣ ಕೊರಿಯಾ, ಸಿಂಗಾಪುರ, ಬ್ರೆಜಿಲ್‌, ಕೆನಡಾ, ಟರ್ಕಿ, ಐರ್ಲೆಂಡ್‌, ಫ್ರಾನ್ಸ್‌, ಇಂಡೊನೇಷಿಯಾ ಸೇರಿದಂತೆ ವಿಶ್ವದ ಇತರೆ ಹಲವು ದೇಶಗಳು ಕೂಡಾ 737 ಮ್ಯಾಕ್ಸ್‌-8 ವಿಮಾನ ಸೇವೆ ರದ್ದುಗೊಳಿಸಿವೆ.

ಇತ್ತೀಚೆಗಷ್ಟೇ ಇಥಿಯೋಫಿಯಾದಲ್ಲಿ ಅಪಘಾತಕ್ಕೆ ಸಿಲುಕಿದ್ದ ಬೋಯಿಂಗ್‌ 737 ಮ್ಯಾಕ್ಸ್‌-8 ವಿಮಾನದ ಪರಿಣಾಮ ನಾಲ್ವರು ಭಾರತೀಯರು ಸೇರಿ ಒಟ್ಟಾರೆ 157 ಮಂದಿ ಪ್ರಯಾಣಿಕರು ಸಾವಿಗೀಡಾಗಿದ್ದರು. ಜೊತೆಗೆ, ಕಳೆದ ಐದು ತಿಂಗಳ ಹಿಂದಷ್ಟೇ, ಇಂಡೋನೇಷಿಯಾದಲ್ಲಿ ಇದೇ ರೀತಿ 180 ಪ್ರಯಾಣಿಕರು ಹೊತ್ತು ಸಾಗುತ್ತಿದ್ದ ಸಂದರ್ಭದಲ್ಲಿಯೂ ವಿಮಾನ ಅಪಘಾತಕ್ಕೀಡಾಗಿ, ಪ್ರಯಾಣಿಕರೆಲ್ಲರೂ ಸಾವನ್ನಪ್ಪಿದ್ದರು.