ಬಸವಣ್ಣನ ಐಕ್ಯತಾಣ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶಕ್ಕೆ ನಾಡಿನ ಮಠಾಧೀಶರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಬಸವೇಶ್ವರರ ಬೃಹತ್ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಕಾಗಿನೆಲೆ ಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಬಾಗಲಕೋಟೆ (ಜ.26): ಕೂಡಲಸಂಗಮದಲ್ಲಿ ಸಂಗೊಳ್ಳಿ ರಾಯಣ್ಣ​​ ಬ್ರಿಗೇಡ್’ನ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ತನ್ನ ಸ್ಥಾನ ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲವೆಂದು ಗುಡುಗಿದ್ದಾರೆ.

ಜತೆಗೆ ಮುಂದಿನ ಸಿಎಂ ಬಿ.ಎಸ್. ಯಡಿಯೂರಪ್ಪರೆವರು ಎಂದು ಈಶ್ವರಪ್ಪ ಹೇಳಿದ್ದಾರೆ.

ದಲಿತ, ಹಿಂದುಳಿದವರಿಗಾಗಿ ರಾಷ್ಟ್ರೀಯ ಸಮಾವೇಶ ನಡೆಸುತ್ತೇವೆ ಎಂದಿರುವ ಈಶ್ವರಪ್ಪ, ಬಿಜೆಪಿ ರಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತನ್ನನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಆ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಹ ಕರೆಸುತ್ತೇವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಶ್ರೀಕೃಷ್ಣ ತಾಯಿ ಹೊಟ್ಟೆಯಲ್ಲೇ ಇರುವಾಗಲೇ ಕಂಸನಿಗೆ ನಡುಕ ಹುಟ್ಟಿತ್ತು, ಹಾಗೆ ಬ್ರಿಗೇಡ್ ಹುಟ್ಟಿ ಕೇವಲ 6 ತಿಂಗಳಿಗೆ ನಡುಕ ಹುಟ್ಟಿದೆ ಎಂದು ಪರೋಕ್ಷವಾಗಿ ಬಿಎಸ್’​ವೈಗೆ ಈಶ್ವರಪ್ಪ ಚಾಟಿ ಬೀಸಿದ್ದಾರೆ.

ಸಮಾವೇಶದಲ್ಲಿ ನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು.