ನವದೆಹಲಿ: ಬ್ಯಾಂಕ್‌ಗಳಲ್ಲಿ ಶ್ರೀಮಂತರಿಗೆ ಮಾತ್ರ ಸಾಲ ಕೊಡ್ತಾರೆ. ಬಡವರನ್ನು ಕಡೆಗಣಿಸ್ತಾರೆ. ಮುಖ ನೋಡಿ ಮಣೆ ಹಾಕ್ತಾರೆ ಅನ್ನೋದು ಹಳೆ ದೂರು. ಇದೀಗ ಈ ದೂರನ್ನೇ ಕಾರ್ಯರೂಪಕ್ಕೆ ಇಳಿಸಲು ಬ್ಯಾಂಕ್‌ಗಳು ಮುಂದಾಗಿವೆ. ಅಂದರೆ ಇನ್ನು ಮುಂದೆ ಸಾಲ ಕೊಡುವ ಮುನ್ನ ಬ್ಯಾಂಕ್‌ ಅಧಿಕಾರಿಗಳೂ ನಿಮ್ಮ ಮುಖವನ್ನು ಚೆನ್ನಾಗಿ ಪರಿಶೀಲನೆ ಮಾಡ್ತಾರೆ.

ನಿಜ. ಅಚ್ಚರಿ ಎನ್ನಿಸಿದರೂ ಇದು ಸತ್ಯ. ಎದುರಿಗೆ ದೊಡ್ಡ ಶ್ರೀಮಂತರಂತೆ ತೋರಿಸಿಕೊಂಡು ಸಾಲ ಪಡೆದು, ಕೊನೆಗೆ ಹೇಳದೇ ಕೇಳದೇ ಪರಾರಿಯಾದ ಉದ್ಯಮಿಗಳಾದ ವಿಜಯ್‌ ಮಲ್ಯ, ನೀರವ್‌ ಮೋದಿ ಮೊದಲಾದವರ ಕೇಸುಗಳಿಂದ ಪಾಠ ಕಲಿತಿರುವ ಬ್ಯಾಂಕ್‌ಗಳು, ಇದೀಗ ಸಾಲ ಪಡೆಯಲು ಬರುವವರ ಮುಖಭಾವ ಅಧ್ಯಯನ ನಡೆಸಲು ನಿರ್ಧರಿಸಿವೆ.

ಬಹಳಷ್ಟುಸಂದರ್ಭದಲ್ಲಿ ದೊಡ್ಡ ಮೊತ್ತದ ಸಾಲ ಪಡೆಯುವ ಉದ್ಯಮಿಗಳು ಒಳಗೆ ಹುಳುಕು ಇಟ್ಟುಕೊಂಡಿದ್ದರೂ, ಅದನ್ನು ಬಹಿರಂಗವಾಗಿ ತೋರಿಸದೇ ಬ್ಯಾಂಕ್‌ ಅಧಿಕಾರಿಗಳನ್ನು ನಂಬಿಸಿ ಸಾಲ ಪಡೆಯುತ್ತಾರೆ. ತಮ್ಮಲ್ಲಿ ಈ ಸಾಲ ಮರುಪಾವತಿ ಸಾಮರ್ಥ್ಯ ಇಲ್ಲದೇ ಇರಬಹುದು ಎಂಬ ಅಳುಕು ಅವರಲ್ಲಿ ಇದ್ದರೂ, ಅದು ಬ್ಯಾಂಕ್‌ ಅಧಿಕಾರಿಗಳ ಗಮನಕ್ಕೆ ಬಂದಿರುವುದಿಲ್ಲ. ಹೀಗಾಗಿ ಇಂಥ ಅಳುಕಿನ ಸುಳಿವು ಕಂಡುಹಿಡಿಯಬಹುದಾದ ವ್ಯವಸ್ಥೆಯೊಂದನ್ನು ರೂಪಿಸಿಕೊಡಿ ಎಂದು ಗುಜರಾತ್‌ನ ಕೆಲ ಖಾಸಗಿ ಬ್ಯಾಂಕ್‌ಗಳು, ಗುಜರಾತ್‌ನ ವಿಧಿವಿಜ್ಞಾನ ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಬ್ಯಾಂಕ್‌ ಕೋರಿಕೆ ಏನು?: ಮುಖಭಾವದ ಅತ್ಯಂತ ಸಣ್ಣ ಸಣ್ಣ ಚಿತ್ರಗಳ ಕೈಪಿಡಿಯೊಂದನ್ನು ಸಿದ್ಧಪಡಿಸಿಕೊಡಿ. ಇದರ ಆಧಾರದಲ್ಲಿ ನಾವು ನಮ್ಮ ಸಿಬ್ಬಂದಿಗೆ ಅನುಮಾನಾಸ್ಪದ ಸಾಲಗಾರರ ಮೇಲೆ ನಿಗಾ ಇಡುವ ಬಗ್ಗೆ ತರಬೇತಿ ನೀಡುತ್ತೇವೆ. ಈ ಮೂಲಕ ಸಂಭವನೀಯ ವಂಚಕರಿಗೆ ಸಾಲ ನೀಡುವುದರಿಂದ ತಪ್ಪಿಸಿಕೊಳ್ಳಬಹುದು ಎಂದು ಬ್ಯಾಂಕ್‌ಗಳು ವಿಧಿವಿಜ್ಞಾನ ತಜ್ಞರಿಗೆ ಮನವಿ ಮಾಡಿವೆ.

ತಜ್ಞರು ಹೇಳುವುದೇನು?: ಸಾಲ ಪಡೆಯುವವ ನಿಯತ್ತಿನ ವ್ಯಕ್ತಿತ್ವ ಹೊಂದಿಲ್ಲದೇ ಇದ್ದಲ್ಲಿ, ಆತ ಮರುಪಾವತಿ ಬಗ್ಗೆ ಅಥವಾ ಸಾಲ ಪಡೆಯುವ ತನ್ನ ಉದ್ದೇಶದ ಬಗ್ಗೆ ಅಳುಕು ಹೊಂದಿದ್ದಲ್ಲಿ, ಅದು ಆತನ ಮುಖದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಇದನ್ನು ಸೂಕ್ಷ್ಮ ಅಧ್ಯಯನದ ಮೂಲಕ ಪತ್ತೆಹಚ್ಚಬಹುದು. ಹೀಗಾಗಿಯೇ ಬ್ಯಾಂಕ್‌ಗಳು ಜಾರಿಗೊಳಿಸಲು ಉದ್ದೇಶಿಸಿರುವ ತಂತ್ರಜ್ಞಾನ ವಂಚಕರನ್ನು ಪತ್ತೆ ಮಾಡಲು ಸಹಕಾರಿಯಾಗಬಹುದು ಎಂದು ಹೇಳಿದ್ದಾರೆ.