ಮುಂಬೈ: ತನಗೆ ನೀಡಬೇಕಿರುವ 550 ಕೋಟಿ ರು. ಬಾಕಿ ಪಾವತಿಸದೇ ನ್ಯಾಯಾಂಗ ನಿಂದನೆ ಮಾಡಿರುವ ಉದ್ಯಮಿ ಅನಿಲ್‌ ಅಂಬಾನಿ ಅವರನ್ನು ಬಂಧಿಸುವಂತೆ ಕೋರಿ ಸ್ವೀಡನ್‌ ಮೂಲದ ಟೆಲಿ ಕಮ್ಯೂನಿಕೇಷನ್ಸ್‌ ಸಂಸ್ಥೆಯಾದ ಎರಿಕ್ಸನ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.

ಎರಿಕ್ಸನ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಅನಿಲ್‌ ಖೇರ್‌, ‘ಅನಿಲ್‌ ಅಂಬಾನಿ ಅವರಿಂದ ಬರಬೇಕಿರುವ ಬಾಕಿಗಾಗಿ ದೀರ್ಘಕಾಲದಿಂದ ಕಾಯುತ್ತಿದ್ದೇವೆ. ಆದರೆ, ರಿಲಯನ್ಸ್‌ ಕಮ್ಯೂನಿಕೇಷನ್ಸ್‌ ಮತ್ತು ಇತರರು ಸುಪ್ರೀಂ ಆದೇಶ ಪಾಲನೆ ಮಾಡದೆ, ನ್ಯಾಯಾಂಗ ನಿಂದನೆ ಮಾಡಿದ್ದಾರೆ,’ ಎಂದು ಸುಪ್ರೀಂ ಕೋರ್ಟ್‌ಗೆ ಹೇಳಿದರು. ಆದಾಗ್ಯೂ, ಈ ಕುರಿತಾದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರಕ್ಕೆ ಮುಂದೂಡಿದೆ.

ಎರಿಕ್ಸನ್‌ ಸಂಸ್ಥೆಗೆ ನೀಡಬೇಕಿರುವ 550 ಕೋಟಿ ರು. ಬಾಕಿಗೆ ಸಂಬಂಧಿಸಿದಂತೆ ರಿಲಯನ್ಸ್‌ ಕಮ್ಯೂನಿಕೇಷನ್ಸ್‌ ಅಧ್ಯಕ್ಷ ಅನಿಲ್‌ ಅಂಬಾನಿ ಅವರು ವೈಯಕ್ತಿಕ ಗ್ಯಾರೆಂಟಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಈ ಬಾಕಿ ಮೊತ್ತವನ್ನು ಪಾವತಿಸುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಬೇಕು. ಜೊತೆಗೆ ಅವರು ದೇಶ ಬಿಟ್ಟು ಪರಾರಿಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೆ, ಬಾಕಿ ಪಾವತಿಸಲು ವಿಫಲವಾದಲ್ಲಿ ಅನಿಲ್‌ ಅಂಬಾನಿ ಅವರನ್ನು ಬಂಧಿಸಬೇಕು ಎಂದು ಎರಿಕ್ಸನ್‌ ಹೇಳಿದೆ.