ಈಗಾಗಲೇ ಮಂಗಳೂರಿನಿಂದ ಉಜಿರೆ- ಚಾರ್ಮಾಡಿ -ಮೂಡಿಗೆರೆ -ಚಿಕ್ಕಮಗಳೂರು -ಕಡೂರು -ಹೊಳಲ್ಕೆರೆಯಿಂದ ಚಿತ್ರದುರ್ಗ ತಲುಪಲು 303 ಕೀ.ಮೀ. ಅಂತರದ ಉತ್ತಮವಾದ ಹೆದ್ದಾರಿ ಇದ್ದರೂ ಈಗ ಬಂಟ್ವಾಳ-ನೆಲ್ಯಾಡಿ-ಶಿಶಿಲ-ಭೈರಾಪುರ-ಮೂಡಿಗೆರೆ ಮೂಲಕ ಚಿಕ್ಕಮಗಳೂರು-ಕಡೂರು-ಹೊಳಲ್ಕೆರೆ ಮೇಲೆ ಚಿತ್ರದುರ್ಗ ತಲುಪಲು ಹೊಸ ರಸ್ತೆ ಯೊಂದರ ಪ್ರಸ್ತಾವನೆ ದೆಹಲಿಯ ಎಲ್. ಇ.ಎ ಅಸೋಸಿಯೇಟ್ಸ್ ಸೌತ್ ಏಷ್ಯಾ ಎಂಬ ಖಾಸಗಿ ಸಂಸ್ಥೆ ಸಿದ್ದಪಡಿಸಿದೆ.

ಚಿಕ್ಕಮಗಳೂರು(ನ.22): ಸುವರ್ಣ ಚತುಷ್ಪಥ ರಸ್ತೆಗೆ ಸಂಪರ್ಕ ಕಲ್ಪಿಸಲು ಶಿಶಿಲ-ಭೈರಾಪುರ-ಮೂಡಿಗೆರೆ ರಸ್ತೆ ನಿರ್ಮಾಣಕ್ಕೆ ಸಿದ್ಧತೆ ನಡೆಸುವ ಮೂಲಕ ಪಶ್ಚಿಮ ಘಟ್ಟದ ದಟ್ಟ ಕಾಡು ಹಾಗೂ ಬೆಟ್ಟ ಪ್ರದೇಶವನ್ನು ಹಾಳುಗೆಡವಲು ಪ್ರಸ್ತಾವನೆ ತಯಾರಿಸಲಾಗಿದೆ ಎಂದು ಪರಿಸರಾಸಕ್ತರು ಆರೋಪಿಸಿದ್ದಾರೆ.

ಈಗಾಗಲೇ ಮಂಗಳೂರಿನಿಂದ ಉಜಿರೆ- ಚಾರ್ಮಾಡಿ -ಮೂಡಿಗೆರೆ -ಚಿಕ್ಕಮಗಳೂರು -ಕಡೂರು -ಹೊಳಲ್ಕೆರೆಯಿಂದ ಚಿತ್ರದುರ್ಗ ತಲುಪಲು 303 ಕೀ.ಮೀ. ಅಂತರದ ಉತ್ತಮವಾದ ಹೆದ್ದಾರಿ ಇದ್ದರೂ ಈಗ ಬಂಟ್ವಾಳ-ನೆಲ್ಯಾಡಿ-ಶಿಶಿಲ-ಭೈರಾಪುರ-ಮೂಡಿಗೆರೆ ಮೂಲಕ ಚಿಕ್ಕಮಗಳೂರು-ಕಡೂರು-ಹೊಳಲ್ಕೆರೆ ಮೇಲೆ ಚಿತ್ರದುರ್ಗ ತಲುಪಲು ಹೊಸ ರಸ್ತೆ ಯೊಂದರ ಪ್ರಸ್ತಾವನೆ ದೆಹಲಿಯ ಎಲ್. ಇ.ಎ ಅಸೋಸಿಯೇಟ್ಸ್ ಸೌತ್ ಏಷ್ಯಾ ಎಂಬ ಖಾಸಗಿ ಸಂಸ್ಥೆ ಸಿದ್ದಪಡಿಸಿದೆ.

ಇದರ ವರದಿ ಆಧಾರದಲ್ಲಿ ಸೋಮವಾರ ಡಿಸಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ. ಇದು ಅಂದಾಜು 357 ಕಿ.ಮೀ. ಉದ್ದದ ರಸ್ತೆ ಎಂದು ಹೇಳಲಾಗಿದೆ ಎಂದು ಭದ್ರಾ ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಡಿ.ವಿ. ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾ ಶಂಕರ್, ವೈಲ್ಡ್ ಕ್ಯಾಟ್-ಸಿ ಶ್ರೀದೇವ್ ಹುಲಿಕೆರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಸ್ತಾವನೆಯಲ್ಲಿ ಹೊಸ ರಸ್ತೆ ನಿರ್ಮಾಣಕ್ಕೆ ಕಾರಣಗಳನ್ನು ನೀಡಿದ್ದು, ಈಗಿರುವ ಮೂಡಿಗೆರೆ-ಚಾರ್ಮಾಡಿ-ಮಂಗಳೂರು ರಸ್ತೆಯನ್ನು ಅಗಲಗೊಳಿಸಲು ಸಾಧ್ಯವಿಲ್ಲ. ಅದು ಮೀಸಲು ಅರಣ್ಯಕ್ಕೆ ಒತ್ತಾಗಿ ಸಾಗುತ್ತದೆ. ರಸ್ತೆ ಅಗಲೀಕರಣಕ್ಕೆ ಅಗತ್ಯ ಭೂ ಸ್ವಾಧೀನ ಕಠಿಣ ಹಾಗೂ ಪರಿಹಾರ ನೀಡುವುದೂ ಕಷ್ಟವಾಗುತ್ತದೆ. ಈ ಹೊಸ ರಸ್ತೆ ನಿರ್ಮಾಣದಿಂದ ವಾಹನ ಓಡಾಟ ಇನ್ನಷ್ಟು ಸುಗಮವಾಗುವುದಲ್ಲದೆ ಮಂಗಳೂರು ಬಂದರಿನಿಂದ ಹಾಗೂ ಬಂದರಿಗೆ ಸರಕುಸಾಗಣೆ ಸುಲಭವಾಗುತ್ತದೆ ಎಂಬ ಅಂಶಗಳನ್ನು ಉಲ್ಲೇಖಿಸಲಾಗಿದೆ.

ಈಗಾಗಲೇ ಮಂಗಳೂರು ಸಂಪರ್ಕಿಸಲು ಚಾರ್ಮಾಡಿ ಘಾಟಿ ಮೂಲಕ, ಶಿರಾಡಿ ಮೂಲಕ, ಕುದುರೆಮುಖ, ಆಗುಂಬೆ, ಸುಬ್ರಮಣ್ಯ, ಶೃಂಗೇರಿ ಮೂಲಕವು ರಸ್ತೆಗಳಿವೆ. ಇದನ್ನು ಪರಿಗಣಿಸದೆ ಸುವರ್ಣಚತುಷ್ಪಥ ರಸ್ತೆ ನೆಪದಲ್ಲಿ ದಟ್ಟ ಕಾಡು, ಎತ್ತರದ ಬೆಟ್ಟಗಳನ್ನು ಹೊಂದಿರುವ, 300ರಿಂದ 400 ಇಂಚು ಮಳೆ ಸುರಿಯುವ ಶಿಶಿಲ-ಭೈರಾಪುರ ಬೆಟ್ಟಪ್ರದೇಶವನ್ನು 18 ಕಿ.ಮೀ. ದೂರ ಛಿದ್ರಗೊಳಿಸಿ ಈ ದುರ್ಗಮ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ರಸ್ತೆ ನಿರ್ಮಾಣವನ್ನು ಈ ಪ್ರದೇಶದ ಪ್ರಾಮುಖ್ಯತೆ ಮತ್ತು ಸೂಕ್ಷ್ಮತೆಯನ್ನು ಅರಿತು ರಾಜ್ಯ ಸರ್ಕಾರ ಕೈಬಿಟ್ಟಿತ್ತು. ಆದರೆ ಕೆಲವು ಜನಪ್ರತಿನಿಧಿಗಳ ಒತ್ತಡದಿಂದ ಈ ಬೇಡದ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂಬ ಆರೋಪವು ಇದೆ.

ಕೇಂದ್ರ ಸರ್ಕಾರ ಹಲವು ನದಿಗಳ ಹಾಗೂ ಹಳ್ಳಗಳ ಹುಟ್ಟಿಗೆ ಮೂಲವಾಗಿರುವ ಪಶ್ಚಿಮಘಟ್ಟವನ್ನು ನಾಶಮಾಡಿ ಶಾಶ್ವತ ರಸ್ತೆ ನಿರ್ಮಿಸಿ ಅಲ್ಲಿ ವಾಹನ ದಟ್ಟಣೆ ಹೆಚ್ಚಿಸಿದರೆ ಆ ಪ್ರದೇಶದ ನೀರವ ಮೌನಕ್ಕೆ ಹಾಗೂ ವನ್ಯಜೀವಿಗಳ ಓಡಾಟಕ್ಕೆ ಆಗುವ ತೊಂದರೆ, ಪಶ್ಚಿಮಘಟ್ಟದ ವಿಶೇಷತೆಯಾದ ಶೋಲಾ ಕಾಡುಗಳ ನಾಶದಿಂದ ಆಗುವ ಪರಿಸರ ಪರಿಣಾಮಗಳ ಬಗ್ಗೆ ಯೋಚಿಸದೆ ಹೊಸ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಅತ್ಯಂತ ಆತುರದ ನಿರ್ಧಾರ ಎನ್ನಬೇಕಾಗಿದೆ.

ಶಿಶಿಲ-ಭೈರಾಪುರ ಬೆಟ್ಟ ಪ್ರದೇಶ ಬಾಳೂರು, ಮೀಯಾರು ಮತ್ತು ಕಬ್ಬಿನಾಲೆ ಮೀಸಲು ಅರಣ್ಯ ಪ್ರದೇಶವನ್ನು ಒಳಗೊಂಡಿದೆ. ಕೇವಲ ಅಭಿವೃದ್ಧಿಯ ಹೆಸರಿನಲ್ಲಿ ನಿಸರ್ಗ ನಿರ್ಮಿತ ಬೆಟ್ಟಗುಡ್ಡಗಳನ್ನು ಹಾಗೂ ನಿತ್ಯಹರಿದ್ವರ್ಣ ಕಾಡನ್ನು ನಾಶ ಮಾಡಿದರೆ ಅಲ್ಲಿ ಬೀಳುವ ಮಳೆ ಹಾಗೂ ಆ ಪ್ರದೇಶದ ಒಂದು ನೈಸರ್ಗಿಕ ವಾತಾವರಣದ ಏರುಪೇರಿನಿಂದ ಮುಂದೆ ಆಗುವ ದುಷ್ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರ ಯೋಚಿಸುತ್ತಿಲ್ಲ. ಕೇಂದ್ರ ಸರ್ಕಾರ ತಕ್ಷಣ ಪರಿಸರಕ್ಕೆ ಮಾರಕವಾದ ಈ ರಸ್ತೆ ನಿರ್ಮಾಣ ಯೋಜನೆ ಕೈಬಿಡಬೇಕಾಗಿದೆ.