ಕೈಗಾ 5,6 ನೇ ಘಟಕಕ್ಕೆ ವೇದಿಕೆ ಸಿದ್ಧ, ಉತ್ತರಕನ್ನಡದಲ್ಲಿ ಮತ್ತೆ ಮರಗಳ ಮಾರಣಹೋಮ?

ಉತ್ತರ ಕನ್ನಡ ಜಿಲ್ಲೆ ಈಗಾಗಲೇ ರಾಷ್ಟ್ರದ ಹಲವು ಯೋಜನೆಗೆ ತನ್ನ ಒಡಲನ್ನು ಬಿಟ್ಟುಕೊಟ್ಟಿದೆ. ಕೈಗಾ, ಸೀಬರ್ಡ್ ನೌಕಾನೆಲೆ ಅಂಥ ಅನೇಕ ಜನರು ತ್ಯಾಗ ಮಾಡಿದ್ದಾರೆ. ಈಗ ಮತ್ತೆ ಸರಕಾರ ಕೈಗಾದ ವಿಸ್ತರಣೆಗೆ ಮುಂದಾಗಿದೆ.  ಯೋಜನೆ ಸಾಕಾರಕ್ಕೆ ಮುಂದಾಗಿದ್ದೆ ಆದಲ್ಲಿ ಸಾವಿರಾರು ಮರಗಳು ಧರೆಗುರುಳುವುದರಲ್ಲಿ ಅನುಮಾನ  ಇಲ್ಲ.

Environment can affect by Kaiga Atomic Power Station KAPS Uttara Kannada 5th and 6th Unit

ವಸಂತಕುಮಾರ್ ಕತಗಾಲ
ಕಾರವಾರ [ನ.04]  ಕೈಗಾದಲ್ಲಿ ಉದ್ದೇಶಿತ ತಲಾ 700 ಮೆ.ವ್ಯಾ.ಗಳ ಎರಡು ಅಣು ವಿದ್ಯುತ್ ಹಾಗೂ ತ್ಯಾಜ್ಯ ಸಂಸ್ಕರಣೆ ಘಟಕ ನಿರ್ಮಾಣ 2026 ರಲ್ಲಿ ಪೂರ್ಣಗೊಳ್ಳಲಿದೆ. ಯೋಜನೆಗೆ 21 ಸಾವಿರ ಕೋಟಿ  ರೂ. ವೆಚ್ಚ ತಲುಗಲಿದೆ ಎಂದು ಅಂದಾಜಿಸಲಾಗಿದೆ.

ಆದರೆ ಇದುವರೆಗೂ ವಿದ್ಯುತ್ ಸಾಗಣೆ ಮಾರ್ಗ ಹಾಗೂ ಮರಗಳ ಕಡಿತದ ಬಗ್ಗೆ ಯಾವುದೆ ನಿರ್ಧಾರ ಪ್ರಕಟಿಸಿಲ್ಲ. ಈ ಎರಡು ಘಟಕಗಳ ನಿರ್ಮಾಣಕ್ಕೆ ಅಗತ್ಯ ಭೂಮಿ ಅಣು ವಿದ್ಯುತ್ ನಿಗಮದ ವಶದಲ್ಲೆ ಇದೆ. ಹಾಗಾಗಿ ಹೆಚ್ಚುವರಿ ಭೂಮಿಯ ಅಗತ್ಯ ಇಲ್ಲ. ಈಗಾಗಲೆ ನಿಗಮಕ್ಕೆ 120 ಹೆಕ್ಟೇರ್ ಅರಣ್ಯ ಭೂಮಿಯನ್ನು ನೀಡಲಾಗಿತ್ತು. ಇದರಲ್ಲಿ ಈಗಿರುವ 4 ಘಟಕಗಳು ಹಾಗೂ ಇತರ ನಿರ್ಮಾಣ ಕಾಮಗಾರಿ ನಡೆದು ಈಗ 54.09  ಹೆಕ್ಟೇರ್ ಅರಣ್ಯ ಭೂಮಿ ಲಭ್ಯವಿದೆ.

ಕೈಗಾದಲ್ಲಿ ಉದ್ದೇಶಿತ ಅಣು ವಿದ್ಯುತ್ ಸ್ಥಾವರದ ಬಗ್ಗೆ ಪರಿಸರ ಪರಿಣಾಮಗಳ ವರದಿಯನ್ನು ಮೆಕಾನ್ ಲಿಮಿಟೆಡ್ ಸಿದ್ಧಪಡಿಸಿದೆ. ಡಿ. 15 ರಂದು ಸಾರ್ವಜನಿಕ ಅಹವಾಲು ಆಲಿಕೆ ನಿಗದಿ ಪಡಿಸಲಾಗಿದೆ. ಉದ್ದೇಶಿತ ಘಟಕಗಳ ನಿರ್ಮಾಣ ಕಾಳಿ ಹುಲಿ ಯೋಜನೆಯ ಆಂತರಿಕ ಝೋನ್‌ ನಲ್ಲಿದೆ. ಕೈಗಾ ಯೋಜನೆಯ ಗಡಿಯಿಂದ ಕೇವಲ 718-1734 ಮೀಟರ್ ಅಂತರದಲ್ಲಿ ಈ ಯೋಜನಾ ಪ್ರದೇಶ ಇದೆ. ಈ ಪ್ರದೇಶದಲ್ಲಿ ಹುಲಿ, ಕಾಡೆಮ್ಮೆ, ಆನೆ, ಚಿರತೆ, ಪೆಂಗೋಲಿನ್, ಜಿಂಕೆ ಮತ್ತಿತರ ಕಾಡು ಪ್ರಾಣಿಗಳಿವೆ.

ಪರಮಾಣು ವಿದ್ಯುತ್ ಸ್ಥಾವರದಿಂದ ವಿಕಿರಣ ಹೊರಸೂಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ವಾತಾವರಣದಲ್ಲಿ ವಿಕಿರಣದ ಪ್ರಭಾವ ಉಂಟಾಗದಂತೆ ತಗ್ಗಿಸಲಾಗುತ್ತದೆ. ಅಣು ತ್ಯಾಜ್ಯದಿಂದ ಪರಿಸರದ ಮೇಲೆ ಮಾರಕ ಪರಿಣಾಮ ಉಂಟಾಗದಂತೆ ಅದನ್ನು ರಕ್ಷಿತ ಕಂಟೇನರ್‌ಗಳಲ್ಲಿ ತುಂಬಿ ಕಂದಕದಲ್ಲಿ ಹೂಳಲಾಗುತ್ತದೆ. ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ. ವಿದ್ಯುತ್ ಉತ್ಪಾದನೆ, ಉದ್ಯೋಗ ನೀಡಿಕೆ, ಸುತ್ತಮುತ್ತಲಿನ ಪರಿಸರದಲ್ಲಿ ಸಾಮಾಜಿಕ ಅಭಿವೃದ್ಧಿ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ನಿರ್ಮಾಣ ಕಾಮಗಾರಿಗೆ 789 ಕಾರ್ಮಿಕರನ್ನು ತೊಡಗಿಸಿಕೊಳ್ಳಲಾಗುತ್ತದೆ.

ಸಾವಿರಾರು ಮರಕ್ಕೆ ಕೊಡಲಿ?: ಈ ಘಟಕಗಳ ನಿರ್ಮಾಣಕ್ಕೆ ಅಣು ವಿದ್ಯುತ್ ನಿಗಮದ ಸ್ವಾಧೀನದಲ್ಲೆ ಇರುವ 54.09 ಹೆಕ್ಟೇರ್ ಅರಣ್ಯಭೂಮಿ ಬಳಸಿಕೊಳ್ಳಲಾಗುತ್ತದೆ. ಒಂದೊಂದು ಹೆಕ್ಟೇರ್‌ನಲ್ಲಿ ಸುಮಾರು 180-200 ಮರಗಳಿವೆ. ಹೀಗಾಗಿ ಸುಮಾರು 10 ಸಾವಿರ ಮರಗಳು ಧರೆಗುರುಳಲಿವೆ. ಟ್ರಾನ್ಸ್‌ಮಿಶನ್ ಲೈನ್ ಬಗ್ಗೆ ಯಾವುದೆ ಪ್ರಸ್ತಾಪ ಇನ್ನೂ ಇಲ್ಲ. ಕೈಗಾ ಅಧಿಕಾರಿಗಳ ಪ್ರಕಾರ ಈಗಿರುವ ವಿದ್ಯುತ್ ಸಾಗಣೆ ಮಾರ್ಗವನ್ನೇ ಬಲಪಡಿಸುವ ಬಗ್ಗೆ ಮಾತುಕತೆ ನಡೆದಿದೆ. ಹೊಸ ಮಾರ್ಗದ ಬಗ್ಗೆ ಸದ್ಯ ಯಾವುದೆ ಪ್ರಸ್ತಾಪ ಇಲ್ಲ. ಆದರೆ ಈಗಿರುವ ಮಾರ್ಗದಲ್ಲಿ ವಿದ್ಯುತ್ ಸಾಗಣೆ ಸಾಧ್ಯವಾಗದಿದ್ದರೆ ಮತ್ತೆ ಹೊಸ ಮಾರ್ಗ ನಿರ್ಮಾಣ ಅನಿವಾರ್ಯ. ಹಾಗಾದರೆ ಸಾವಿರ ಸಾವಿರ ಸಂಖ್ಯೆಯಲ್ಲಿ ಮರಗಳು ಧರೆಗುರುಳಲಿವೆ. 

ಡಿ. 15ರಂದು ಸಭೆ: ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್) ಕಂಪನಿಯವರು ಕೈಗಾ ಪರಮಾಣು ವಿದ್ಯುತ್ ಯೋಜನೆಯ ಪ್ರದೇಶದಲ್ಲಿ ಹೆಚ್ಚುವರಿ ಪರಮಾಣು ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಈ ಸಂಬಂಧ ಪರಿಸರ ಕುರಿತಾಗಿ ಸಾರ್ವಜನಿಕ ಆಲಿಕೆ ಸಭೆಯನ್ನು ಡಿ. 15ರಂದು ಬೆಳಗ್ಗೆ 10 ಗಂಟೆಗೆ ಎನ್‌ಪಿಸಿಐಎಲ್ ಟೌನ್‌ಶಿಪ್ ಪ್ರದೇಶದಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯಲ್ಲಿ ಯೋಜನೆಯ ಪರಿಸರಾಘಾತ ಅಧ್ಯಯನ ವರದಿ ಮತ್ತು ಕಾರ್ಯಕಾರಿ ಸಾರಾಂಶ ಸಿಡಿಯೊಂದಿಗೆ ಲಭ್ಯವಿದ್ದು, ಪರಾಮರ್ಶಿಸಬಹುದು ಸಿಬ್ಬಂದಿ ಹಾಗೂ ಅವರ ಕುಟುಂಬಕ್ಕೆ ಮಲ್ಲಾಪುರ ವಸತಿ ಸಂಕೀರ್ಣದಲ್ಲಿ ವಸತಿ ವ್ಯವಸ್ಥೆಕಲ್ಪಿಸಲಾಗುತ್ತದೆ. 

Latest Videos
Follow Us:
Download App:
  • android
  • ios