ವಿಧಾನಸಭೆ[ಜು.24]: ‘ನನಗೆ ರಾಜಕೀಯ ಕುಟುಂಬದ ಹಿನ್ನೆಲೆ ಇದ್ದರೂ ಅದರಿಂದ ದೂರ ಇರಲು ಬಯಸಿದ್ದೆ. ನನ್ನ ಮಡದಿಯೂ ಸಹ ನಾನು ರಾಜಕಾರಣಕ್ಕೆ ಹೋಗಬಾರದು ಎಂದು ಮದುವೆಗೆ ಮೊದಲೇ ಷರತ್ತು ಹಾಕಿದ್ದಳು. ಆದರೆ, ವಿಧಿಯಾಟ ನೋಡಿ. ರಾಜಕೀಯಕ್ಕೆ ನಾನು ಮಾತ್ರವಲ್ಲ, ನನ್ನ ಪತ್ನಿಯೂ ಬರುವಂತಾಯಿತು..!’

ಇದು ವಿಶ್ವಾಸ ಮತಯಾಚನೆ ನಿರ್ಣಯ ಮತಕ್ಕೆ ಹಾಕುವ ಮೊದಲು ವಿದಾಯ ಭಾಷಣ ಮಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಹಳೆಯ ಘಟನೆಗಳನ್ನು ಮೆಲುಕು ಹಾಕಿದರು.

ಶಿಕ್ಷಣ ಮುಗಿಸಿದ ಬಳಿಕ ನನ್ನ ವೃತ್ತಿ ಜೀವನ ಚಿತ್ರರಂಗದಲ್ಲಿ ನಿರ್ಮಾಪಕನಾಗಿ, ಪ್ರದರ್ಶಕ ಮತ್ತು ವಿತರಕನಾಗಿ ಆರಂಭಿಸಿದೆ. ನಾನು ರಾಜಕೀಯಕ್ಕೆ ಬರುವುದು ತಂದೆ ಎಚ್‌.ಡಿ.ದೇವೇಗೌಡ ಅವರಿಗೆ ಇಷ್ಟಇರಲಿಲ್ಲ. ನನ್ನ ಪತ್ನಿಯೂ ಸಹ ರಾಜಕಾರಣದಲ್ಲಿದ್ದರೆ ಮದುವೆಯಾಗುವುದಿಲ್ಲ, ರಾಜಕೀಯಕ್ಕೆ ಹೋಗಬಾರದು ಎಂದು ಷರತ್ತು ಹಾಕಿದ್ದಳು. ನನಗೂ ರಾಜಕೀಯಕ್ಕೆ ಬರುವ ಮನಸ್ಸಿರಲಿಲ್ಲ. ಆದರೆ, ಬದಲಾದ ಪರಿಸ್ಥಿತಿಯಲ್ಲಿ ವಿಧಿಯಾಟದಿಂದ ನಾನಷ್ಟೇ ಅಲ್ಲ ನನ್ನ ಪತ್ನಿಯೂ ರಾಜಕೀಯಕ್ಕೆ ಬರುವಂತಾಯಿತು. ಹಲವು ತಪ್ಪುಗಳನ್ನು ಮಾಡಿದ್ದರೂ ಅವುಗಳನ್ನು ತಿದ್ದಿಕೊಂಡು ಜೀವನ ನಡೆಸುತ್ತಿದ್ದೇನೆ. ತಪ್ಪುಗಳನ್ನು ತಿದ್ದಿಕೊಳ್ಳಲು ಪತ್ನಿಯೂ ಸಮಯಾವಕಾಶ ನೀಡಿ ಸಹಕರಿಸಿದಳು ಎಂದು ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಕಳೆದ ಮೂರು ವಾರಗಳಿಂದ ಏನೇನಾಯ್ತು?

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಹೋರಾಟಗಳನ್ನು ಕಂಡಿದ್ದೇನೆ. ಅವರ ಬಗ್ಗೆ ಪ್ರತಿಪಕ್ಷದ ನಾಯಕರು ಲಘುವಾಗಿ ಮಾತನಾಡಬಾರದು. ಅವರು ಶ್ರಮಪಟ್ಟು ರಾಜಕೀಯವಾಗಿ ಬೆಳೆದಿದ್ದಾರೆಯೇ ಹೊರತು ಯಾರದೇ ನೆರಳಲ್ಲಿ ಬಂದಿಲ್ಲ. ‘ಪ್ರಜಾಪ್ರಭುತ್ವದ ಬುಡಮೇಲು ಪಿತಾಮಹ’ ಎಂದು ಅವರನ್ನು ಕರೆದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸಹೋದರ ಎಚ್‌.ಡಿ.ರೇವಣ್ಣನಿಗೆ ತಂದೆಯ ಆಶೀರ್ವಾದ ಇತ್ತು. ಆದರೆ, ನಾನು ರಾಜಕೀಯಕ್ಕೆ ಬರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು. ತಳಮಟ್ಟದಿಂದ ರೇವಣ್ಣ ಬೆಳೆದು ಬಂದಿದ್ದರು. ಪಕ್ಷದ ಕಾರ್ಯಕರ್ತರು, ನಾಯಕರ ಒತ್ತಾಯದ ಮೇರೆಗೆ ರಾಜಕೀಯಕ್ಕೆ ನಾನು ಬಂದಾಗ ಬಿ ಫಾರಂ ಅನ್ನು ಎಸೆದಿದ್ದರು. 1996ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದೆ. ಮುಂದೆ 1999ರಲ್ಲಿ ಸಾತನೂರು ಕ್ಷೇತ್ರದಿಂದ ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಬೇಕಾಯಿತು.

ಇದೇ ಸಂದರ್ಭದಲ್ಲಿ ಸಹೋದರ ಎಚ್‌.ಡಿ.ರೇವಣ್ಣ ಮತ್ತು ಎಚ್‌.ಡಿ.ದೇವೇಗೌಡ ಅವರು ಸಹ ಸೋಲನುಭವಿಸಿದರು. ಈ ವೇಳೆ ರಾಜಕೀಯ ನಿವೃತ್ತಿ ಪಡೆಯುವ ಬಗ್ಗೆ ಚಿಂತನೆ ನಡೆಸಿದ್ದೆ. ಆದರೆ, ಪಕ್ಷದ ಕಾರ್ಯಕರ್ತರ ಒತ್ತಾಯದ ಮೇರೆಗೆ 2004ರಲ್ಲಿ ವಿಧಾನಸಭೆಗೆ ಆಯ್ಕೆಯಾದೆ. ನಂತರ ಹಲವು ರಾಜಕೀಯ ಬದಲಾವಣೆಯಿಂದಾಗಿ ಮುಖ್ಯಮಂತ್ರಿಯಾಗಬೇಕಾಯಿತು ಎಂದು ತಮ್ಮ ರಾಜಕೀಯ ಜೀವನದ ಬಗ್ಗೆ ಮಾಹಿತಿ ನೀಡಿದರು.