ಎಂಜಿನಿಯರಿಂಗ್ ಶುಲ್ಕ ಹೆಚ್ಚಳ: ಮುಂದುವರೆದ ಸಸ್ಪೆನ್ಸ್..!

Engineering fees increase: suspense  continues
Highlights

ಎಂಜಿನಿಯರಿಂಗ್ ಶುಲ್ಕ ಹೆಚ್ಚಳ ವಿಚಾರ

ಮತ್ತೊಂದು ಸುತ್ತಿನ ಸಭೆಗೆ ಸಿಎಂ ಸೂಚನೆ

ಶೇ.30 ರಷ್ಟು ಶುಲ್ಕ ಹೆಚ್ಚಳ ಸಾಧ್ಯವಿಲ್ಲ ಎಂದ ಸಿಎಂ

ಶುಲ್ಕ ಹೆಚ್ಚಳಕ್ಕೆ ಪಟ್ಟು ಹಿಡಿದ ಖಾಸಗಿ ಶಿಕ್ಷಣ ಸಂಸ್ಥೆಗಳು

ಬೆಂಗಳೂರು(ಜೂ.14): ಸರ್ಕಾರಿ ಕೋಟಾದ ಎಂಜಿನಿಯರಿಂಗ್ ಸೀಟುಗಳ ಶುಲ್ಕ ಹೆಚ್ಚಳ ಸಂಬಂಧ ಉನ್ನತ ಶಿಕ್ಷಣ ಅಧಿಕಾರಿಗಳು ಹಾಗೂ ಖಾಸಗಿ ಎಂಜಿನಿಯರಿಂಗ್ ಕಾಳೇಜುಗಳ ಸಂಘಟನೆಗಳು ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ನಡೆದ ಸಭೆಯ ಬಳಿಕ ಮಾತನಾಡಿದ ಸಿಎಂ, ಖಾಸಗಿ ಶಿಕ್ಷಣ ಸಂಸ್ಥೆಗಳು ಶೇ.30 ರಷ್ಟು ಶುಲ್ಕ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಈಗಷ್ಟೇ ಹೊಸ ಸರ್ಕಾರ ರಚನೆಯಾಗಿರುವ ಕಾರಣ ಶೇ.30ರಷ್ಟು ಹಶುಲ್ಕ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾಗಿ ಹೇಳಿದರು.

ಕಾಲೇಜುಗಳ ಆಡಳಿತ ಮಂಡಳಿ ಮತ್ತು ಸರ್ಕಾರ ಈ ಕುರಿತು ಚರ್ಚಿಸಿ, 2006ರಲ್ಲಿಯೇ ಪ್ರತಿ ವರ್ಷ ಶೇ.8ರಷ್ಟು ಮಾತ್ರ ಶುಲ್ಕ ಹೆಚ್ಚಳ ಮಾಡಬೇಕು ಎಂದು ಒಪ್ಪಂದಕ್ಕೆ ಬರಲಾಗಿದೆ. ಅದರಂತೆ ನಡೆದುಕೊಳ್ಳುವಂತೆ ಸೂಚನೆ ನೀಡಿದ್ದಾಗಿ ಕುಮಾರಸ್ವಾಮಿ ತಿಳಿಸಿದರು. ಆದರೆ ಮತ್ತೊಂದು ಸುತ್ತಿನ ಸಭೆ ನಡೆಸಿ ಈ ಕುರಿತು ಅಂತಿಮ ತೀರ್ಮಾನಕ್ಕೆ ಬರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಅವರು ಸ್ಪಷ್ಟಪಡಿಸಿದರು.

ನ್ಯಾ.ಡಿ.ವಿ. ಶೈಲೇಮದ್ರ ಕುಮಾರ್ ನೇತೃತ್ವದ ಶುಲ್ಕ ನಿಯಂತ್ರಣ ಸಮಿತಿ ಶೇ. 8ರಷ್ಟು ಶುಲ್ಕ ಹೆಚ್ಚಳ ಮಾಡಿ ಕಾಲೇಜುಗಳಿಗೆ ನಿರ್ದೇಶನ ನಿಡಿದೆಯೇ ವಿನಾಃ ಸರ್ಕಾರದ ಗಮನಕ್ಕೆ ತಂದಿಲ್ಲ. ಆದರೆ ಸಮಿತಿಯ ಮಾರ್ಗಸೂಚಿಗಳನ್ನು ಅನುಷ್ಠಾನ ಮಾಡುವಂತೆ ನ್ಯಾಯಾಲಯದ ಮೊರೆ ಹೋದಲ್ಲಿ ರಾಜ್ಯ ಸರ್ಕಾರದಿಂದ ಕಾನೂನು ಹೋರಾಟ ನಡೆಸಲಾಗುವುದು ಎಂದು ಸಿಎಂ ಎಚ್ಚರಿಸಿದ್ದಾರೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖಾಸಗಿ ಎಂಜಿನಿಯರಿಂಗ್ ಕಾಲೇಜಯಗಳ ಒಕ್ಕೂಟದ ಕಾರ್ಯದರ್ಶಿ ಪಾಂಡುರಂಗ ಶೆಟ್ಟಿ, ಕಳೆದ ಮೂರು ವರ್ಷಗಳಿಂದ ಶುಲ್ಕ ಹೆಚ್ಚಳ ಮಾಡಿಲ್ಲ, ಕಳೆದ ಬಾರಿ ಕೊನೆ ಗಳಿಗೆಯಲ್ಲಿ ಸರ್ಕಾರದ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಲಾಗಿತ್ತು. ಆದರೆ ಈ ಬಾರಿ ಯಾವುದೇ ಕಾರಣಕ್ಕೂ ಸರ್ಕಾರದ ಪ್ರಸ್ತಾವನೆ ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

loader