ಎರಡು ವಾರಗಳ ಹಿಂದಷ್ಟೇ ಮಾವುತನೊಬ್ಬನನ್ನು ಬಲಿ ಪಡೆದಿದ್ದ ದುಬಾರೆ ಶಿಬಿರದ ಸಾಕಾನೆಯಾದ ಎಂಟು ವರ್ಷದ ಕಾರ್ತಿಕ ಇದೀಗ ಮತ್ತೊಬ್ಬ ಮಾವುತನನ್ನು ತಿವಿದು ಕೊಂದಿದೆ.
ಕುಶಾಲನಗರ (ಮೇ.04): ಎರಡು ವಾರಗಳ ಹಿಂದಷ್ಟೇ ಮಾವುತನೊಬ್ಬನನ್ನು ಬಲಿ ಪಡೆದಿದ್ದ ದುಬಾರೆ ಶಿಬಿರದ ಸಾಕಾನೆಯಾದ ಎಂಟು ವರ್ಷದ ಕಾರ್ತಿಕ ಇದೀಗ ಮತ್ತೊಬ್ಬ ಮಾವುತನನ್ನು ತಿವಿದು ಕೊಂದಿದೆ.
ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಸಾಕಾನೆ ಶಿಬಿರದ ಮಾವುತ ಮಣಿ (೨೩) ಮೃತಪಟ್ಟವರು. ಮಣಿ ಸಂಜೆ ವೇಳೆ ಆಹಾರ ನೀಡಲು ತೆರಳಿದ ಸಂದರ್ಭದಲ್ಲಿ ಆನೆ ದಂತದಿಂದ ತಿವಿದಿದೆ. ಇದರಿಂದ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಅರಣ್ಯ ವಲಯಾಧಿಕಾರಿ ನೆಹರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ಮತ್ತಿತರರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಏ.17 ರಂದು ಕಾರ್ತಿಕ ಆನೆ ಅಣ್ಣು ಎಂಬ ಮಾವುತನನ್ನು ತಿವಿದು ಸಾಯಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
