ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಅರುಣ್'ನನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕರೆತಂದಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಸಕಲೇಶಪುರ(ಜೂ.04): ರಸ್ತೆ ಬದಿಯಲ್ಲಿ ಕಾಡಾನೆ ಮರಿಗೆ ಜನ್ಮ ನೀಡಿರುವುದನ್ನು ನೋಡಿ, ಫೋಟೋ ತೆಗೆಯಲು ಮುಂದಾಗಿದ್ದ ವ್ಯಕ್ತಿಯನ್ನು ಕಾಡಾನೆ ಹಿಂಡು ದಾಳಿ ನಡೆಸಿ ಸಾಯಿಸಿದೆ.

ಈ ಘಟನೆ ನಡೆದಿರುವುದು ಹಾಸನ ಜಿಲ್ಲೆ ಸಕಲೇಶಪುರದ ಹೈದೂರಿನಲ್ಲಿ. ಹೈದೂರಿನ ಕಾಫಿ ಬೆಳೆಗಾರ ಅರುಣ್, ಕಾಡಾನೆ ದಾಳಿಗೆ ತುತ್ತಾದ ವ್ಯಕ್ತಿ. ಬಾಳ್ಳುಪೇಟೆ -ಕೊಡ್ಲಿಪೇಟೆ ಮುಖ್ಯ ರಸ್ತೆಯ ಬದಿಯಲ್ಲಿ ಹೆಣ್ಣಾನೆ ಮರಿಯೊಂದಕ್ಕೆ ಜನ್ಮ ನೀಡಿತ್ತು. ಈ ಸುದ್ದಿ ತಿಳಿದು ನಿನ್ನೆ ರಾತ್ರಿ ಹೈದೂರು ಸುತ್ತಮುತ್ತಲ ಜನರು ಕಾಡಾನೆ ನೋಡಲು ಮುಗಿಬಿದ್ದಿದ್ದರು. ಹಿಂಡಿನಲ್ಲಿ 20 ಕ್ಕೂ ಹೆಚ್ಚು ಕಾಡಾನೆಗಳಿದ್ದವು, ಜೀಪಿನಲ್ಲಿ ಕುಳಿತು ಅರುಣ್ ಫೋಟೋ ತೆಗೆಯಲು ಮುಂದಾದ ವೇಳೆ ಕಾಡಾನೆ ದಾಳಿ ನಡೆಸಿ ಬಲಿ ತೆಗೆದುಕೊಂಡಿವೆ. ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಅರುಣ್'ನನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕರೆತಂದಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.