ಕೊಚ್ಚಿ[ಮೇ.10]: ಮುಷ್ಕರ, ಪ್ರತಿಭಟನೆಗಳಿಗೆ ಖ್ಯಾತಿ ಹೊಂದಿರುವ ಕೇರಳದಲ್ಲಿ ಇದೀಗ ಆನೆಗಳೂ ಮುಷ್ಕರಕ್ಕೆ ಇಳಿದಿದೆ. ಮೇ 11ರಿಂದ ರಾಜ್ಯದಲ್ಲಿ ಆರಂಭವಾಗುವ ದೇಗುಲಗಳ ಉತ್ಸವದಲ್ಲಿ ಭಾಗಿಯಾಗುವುದಿಲ್ಲ ಎಂದು ‘ಆನೆಗಳು ಘೋಷಿಸಿವೆ’. ಇದು ಸಹಜವಾಗಿಯೇ ಮೇ 13ರಂದು ನಡೆಯಬೇಕಿರುವ ತ್ರಿಶೂರಿನ ಪ್ರಸಿದ್ಧ ಪೂರಂ ಉತ್ಸವ ಸೇರಿದಂತೆ ಇತರೆ ಉತ್ಸವಗಳ ಮೇಲೆ ಕರಿನೆರಳು ಬೀರಿದೆ. ಕೇರಳದ ಬಹುತೇಕ ದೇಗುಲ ಉತ್ಸವಗಳ ವೇಳೆ ಆನೆಗಳ ಮೆರವಣಿಗೆ ಅತ್ಯಂತ ಪ್ರಸಿದ್ಧ ಮತ್ತು ಮನಮೋಹಕವಾಗಿರುವ ಕಾರಣ, ಆನೆಗಳ ಮುಷ್ಕರ ಇದೀಗ ರಾಜ್ಯದಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ.

ಅಷ್ಟಕ್ಕೂ ಆನೆಗಳ ಈ ಮುಷ್ಕರಕ್ಕೆ ಕಾರಣವಾಗಿರುವುದು, ರಾಜ್ಯದ ಅತ್ಯಂತ ಜನಪ್ರಿಯ ಆನೆ ಎಂಬ ಹಿರಿಮೆ ಹೊಂದಿರುವ ಭಗವತಿ ದೇಗುಲದ ಆಡಳಿತ ಮಂಡಳಿಯ ಸಾಕಾನೆ ‘ಥೇಚಿಕೊಟ್ಟುಕಾವು ರಾಮಚಂದ್ರನ್‌’ಗೆ ಈ ಬಾರಿ ಯಾವುದೇ ಮೆರವಣಿಗೆಯಲ್ಲಿ ಭಾಗಿಯಾಗದಂತೆ ಅರಣ್ಯ ಇಲಾಖೆ ನಿಷೇಧ ಹೇರಿರುವುದು. 54 ವರ್ಷ ವಯಸ್ಸಿನ ಭಾಗಶಃ ಅಂಧತ್ವಕ್ಕೆ ತುತ್ತಾಗಿರುವ ರಾಮಚಂದ್ರನ್‌ ಕಳೆದ ಫೆಬ್ರುವರಿ ತಿಂಗಳಲ್ಲಿ ಗೃಹಪ್ರವೇಶ ಕಾರ್ಯಕ್ರಮವೊಂದರ ವೇಳೆ ಇಬ್ಬರನ್ನು ಹತ್ಯೆ ಮಾಡಿತ್ತು. ಅದೂ ಅಲ್ಲದೆ ಇದುವರೆಗೆ ರಾಮಚಂದ್ರನ್‌ಗೆ 13 ಜನ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಆನೆಗೆ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ಕೆಲ ತಿಂಗಳ ಹಿಂದೆ ರಾಜ್ಯದ ಅರಣ್ಯ ಇಲಾಖೆ ನಿಷೇಧ ಹೇರಿತ್ತು. ಆದರೆ ಕೆಲವೊಂದು ಷರತ್ತುಗೊಳಿಗೆ ಒಳಪಟ್ಟು ಮತ್ತೆ ಆನೆಗೆ ಅವಕಾಶ ನೀಡಲಾಗುವುದು ಎಂದು ರಾಜ್ಯದ ಅರಣ್ಯ ಸಚಿವ ರಾಜ ಇತ್ತೀಚೆಗೆ ಭರವಸೆ ನೀಡಿದ್ದರು. ಆದರೆ ಅವರು ತಮ್ಮ ಭರವಸೆಯಿಂದ ಇದೀಗ ಹಿಂದೆ ಸರಿದಿದ್ದಾರೆ.

ಹೀಗಾಗಿ ರಾಮಚಂದ್ರನ್‌ಗೆ ಅನುಮತಿ ಕೊಡುವವರೆಗೂ ತಾವೂ ಯಾವುದೇ ಆನೆಗಳನ್ನು ಉತ್ಸವಕ್ಕೆ ಕಳುಹಿಸುವುದಿಲ್ಲ ಎಂದು ಆನೆ ಮಾಲೀಕರ ಸಂಘ ಘೋಷಿಸಿದೆ. ಹೀಗಾಗಿ ಆನೆಗಳು ಇಲ್ಲದೇ ಉತ್ಸವ ನಡೆಸಬೇಕಾದ ದೇಗುಲಗಳ ಆಡಳಿತ ಮಂಡಳಿಯನ್ನು ಕಾಡುತ್ತಿದೆ.

ಸರ್ಕಾರದ ಲೆಕ್ಕಾಚಾರದ ಪ್ರಕಾರ ಕೇರಳದಲ್ಲಿ 550 ಸಾಕಾನೆಗಳಿವೆ. ಆದರೆ ಈ ಸಂಖ್ಯೆ 800ರವರೆಗೂ ಇದೆ ಎಂಬ ಲೆಕ್ಕಾಚಾರವಿದೆ. ಒಂದು ಆನೆಯನ್ನು ಒಂದು ದಿನ ದೇಗುಲಕ್ಕೆ ಕಳುಹಿಸಬೇಕಾದಲ್ಲಿ ಕನಿಷ್ಠ 10000 ರು.ನಿಂದ 5 ಲಕ್ಷ ರು.ವರೆಗೂ ಶುಲ್ಕ ವಿಧಿಸಲಾಗುತ್ತದೆ. ಏಷ್ಯಾದಲ್ಲೇ 2ನೇ ಅತಿದೊಡ್ಡ ಆನೆ ಎಂಬ ಹಿರಿಮೆ ಹೊಂದಿರುವ ರಾಮಚಂದ್ರನ್‌ ಒಂದು ದಿನ ದೇಗುಲಕ್ಕೆ ಬರಬೇಕಾದಲ್ಲಿ 5-7 ಲಕ್ಷ ರು.ವರೆಗೂ ಶುಲ್ಕ ನೀಡಬೇಕಾಗುತ್ತದೆ.