ಇನ್ನುಮುಂದೆ ಅರ್ಜಿ ಸಲ್ಲಿಸಿದ ಒಂದೇ ದಿನದಲ್ಲಿ ಮನೆಗೆ ವಿದ್ಯುತ್

First Published 8, Feb 2018, 10:29 AM IST
Electricity Connection In One Day
Highlights

ಮಧ್ಯವರ್ತಿಗಳ ಸಹಾಯವಿಲ್ಲದೆ ಆನ್‌ಲೈನ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಿ ವಿದ್ಯುತ್ ಸಂಪರ್ಕ ಪಡೆಯಲು ಅನುಕೂಲವಾಗುವಂತೆ ಇಂಧನ ಇಲಾಖೆ ‘ಸವಿ ಕಿರಣ’ ಎಂಬ ನೂತನ ಫಾಸ್ಟ್‌ಟ್ರ್ಯಾಕ್ ಯೋಜನೆಯನ್ನು ಜಾರಿಗೊಳಿಸಿದೆ.

ಬೆಂಗಳೂರು: ಮಧ್ಯವರ್ತಿಗಳ ಸಹಾಯವಿಲ್ಲದೆ ಆನ್‌ಲೈನ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಿ ವಿದ್ಯುತ್ ಸಂಪರ್ಕ ಪಡೆಯಲು ಅನುಕೂಲವಾಗುವಂತೆ ಇಂಧನ ಇಲಾಖೆ ‘ಸವಿ ಕಿರಣ’ ಎಂಬ ನೂತನ ಫಾಸ್ಟ್‌ಟ್ರ್ಯಾಕ್ ಯೋಜನೆಯನ್ನು ಜಾರಿಗೊಳಿಸಿದೆ. ಸದ್ಯ ಬೆಂಗಳೂರಿನ 49 ಬೆಸ್ಕಾಂ ಉಪ ವಿಭಾಗಗಳಲ್ಲಿ ಸವಿ ಕಿರಣ ಯೋಜನೆ ಜಾರಿಗೆ ತರಲಾಗಿದ್ದು, ಹಂತ ಹಂತವಾಗಿ ರಾಜ್ಯಾದ್ಯಂತ ಯೋಜನೆ ವಿಸ್ತರಣೆಗೆ ಇಲಾಖೆ ನಿರ್ಧರಿಸಿದೆ. ಎಂ.ಜಿ. ರಸ್ತೆಯ ಬೆಸ್ಕಾಂ ಕಚೇರಿಯಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಈ ‘ಸವಿ ಕಿರಣ’ ಆನ್‌ಲೈನ್ ಸೇವೆಗೆ ಬುಧವಾರ ಅಧಿಕೃತ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಗ್ರಾಹಕರು ಹೊಸ ವಿದ್ಯುತ್ ಪಡೆಯಲು ಅಷ್ಟೇ ಅಲ್ಲದೆ, ಹೆಸರು ಬದಲಾವಣೆ, ಬಿಲ್ ಬದಲಾವಣೆಗಳಿಗೂ ಸವಿಕಿರಣ ಸಾಫ್ಟ್ ಟ್ಯಾಕ್ ಮೂಲಕ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ 24 ಗಂಟೆಯೊಳಗೆ ವಿದ್ಯುತ್ ಸಂಪರ್ಕ ಸೇವೆ ಲಭ್ಯವಾಗಲಿದೆ. 7.5 ಕಿಲೋ ವ್ಯಾಟ್ ಗೃಹ ಬಳಕೆಯ ಮತ್ತು ವಾಣಿಜ್ಯ ಬಳಕೆಯ ಗ್ರಾಹಕರು ‘ಸವಿ ಕಿರಣ’ ಯೋಜನೆಯ ಸೌಲಭ್ಯ ಪಡೆಯ ಬಹುದು ಎಂದು ವಿವರಿಸಿದರು.

ಈ ಯೋಜನೆ ಪ್ರಕಾರ ವಿದ್ಯುತ್ ಸಂಪರ್ಕ ಪಡೆಯಲು ಈ ವರೆಗೆ ಆಫ್‌ಲೈನ್ ಅರ್ಜಿ ಮೂಲಕ ಹೆಸರು, ವಿಳಾಸ ಹಾಗೂ ಇತರೆ ಮಾಹಿತಿ ದಾಖಲೆಗಳನ್ನು ನೀಡುತ್ತಿದ್ದಂತೆ ಇನ್ಮುಂದೆ ಎಲ್ಲ ಮಾಹಿತಿ, ದಾಖಲೆಗಳನ್ನು ಆನ್‌ಲೈನ್ ಮೂಲಕವೇ ನೀಡಿದರೆ ಒಂದೇ ದಿನದಲ್ಲಿ ವಿದ್ಯುತ್ ಸಂಪರ್ಕ ಸೇವೆ ದೊರೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ಶಾಸಕ ಎನ್.ಎ. ಹ್ಯಾರಿಸ್, ಇಂಧನ ಇಲಾಖೆಯ ಅಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

loader