ರಾಜ್ಯಸಭಾ ಚುನಾವಣೆಗೆ ಆರಂಭವಾಗಿದೆ ರಾಜಕೀಯ ಪಕ್ಷಗಳ ಬಿಸಿಬಿಸಿ ಲೆಕ್ಕಾಚಾರ

First Published 24, Feb 2018, 11:38 AM IST
Election to 58 Rajya Sabha seats announced
Highlights

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಭರಾಟೆ ಆರಂಭವಾಗಿರುವ ವೇಳೆಯಲ್ಲೇ ರಾಜ್ಯಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಲೆಕ್ಕಾಚಾರ ಶುರುವಾಗಬೇಕಿದೆ.

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಭರಾಟೆ ಆರಂಭವಾಗಿರುವ ವೇಳೆಯಲ್ಲೇ ರಾಜ್ಯಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಲೆಕ್ಕಾಚಾರ ಶುರುವಾಗಬೇಕಿದೆ.

ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ವಿಧಾನಸಭಾ ಸದಸ್ಯರು ತಾವು ಚುನಾವಣೆಗೆ ಸ್ಪರ್ಧಿಸುವ ಮೊದಲು ಮಾ.23ರಂದು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ತಮ್ಮ ಮತ ಚಲಾಯಿಸಲಿದ್ದಾರೆ.

ತೆರವಾಗಿರುವ ಸ್ಥಾನಗಳ ಪೈಕಿ ಎರಡು ಬಿಜೆಪಿ, ಒಂದು ಕಾಂಗ್ರೆಸ್ ಮತ್ತು ಒಂದು ಪಕ್ಷೇತರ. ಈಗಿನ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ಸಿಗೆ ಎರಡು ಸ್ಥಾನ ಮತ್ತು ಬಿಜೆಪಿಗೆ ಒಂದು ಸ್ಥಾನ ನಿರಾಯಾಸವಾಗಿ ಲಭಿಸುವ ಸಾಧ್ಯತೆ ಹೆಚ್ಚಿದೆ. ಮೂರನೇ ಸ್ಥಾನಕ್ಕಾಗಿ ಕಾಂಗ್ರೆಸ್

ಮತ್ತು ಜೆಡಿಎಸ್ ನಡುವೆ ಜಟಾಪಟಿ ನಡೆಯುವ ನಿರೀಕ್ಷೆಯಿದ್ದು, ಕಾಂಗ್ರೆಸ್ ಪಕ್ಷವೇ ಮೇಲುಗೈ ಸಾಧಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಶುಕ್ರವಾರ ಸಂಜೆ ರಾಜ್ಯಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡಿ ರುವುದರಿಂದ ಇದುವರೆಗೆ ಮೂರೂ ಪ್ರಮುಖ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಯಾವುದೇ ಗಂಭೀರ ಚರ್ಚೆ ನಡೆದಿಲ್ಲ. ಇನ್ನಷ್ಟೇ ಪ್ರಕ್ರಿಯೆ ಆರಂಭ ವಾಗಬೇಕಿದೆ.

ಶನಿವಾರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಮೂರು ದಿನಗಳ ಪ್ರವಾಸ ನಡೆಸಲಿದ್ದು, ಆ ನಂತರವೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಗೆ ಒಂದೇ ಸ್ಥಾನ ಲಭಿಸುವುದರಿಂದ ಹೆಚ್ಚು ಗೊಂದಲಕ್ಕೀಡಾಗಿಲ್ಲ. ಇನ್ನು ಜೆಡಿಎಸ್‌ನಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಚಿಂತನೆ ಇನ್ನೂ ನಡೆದಿಲ್ಲ. ಬೆಳವಣಿಗೆಗಳನ್ನು ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

loader