ಲೋಕಸಮರದ ದಿನಾಂಕ ಪ್ರಕಟ: ಮತದಾನಕ್ಕೆ ಸಜ್ಜಾಯಿತು ದೇಶ!
ಹೊರಬಿತ್ತು 17ನೇ ಲೋಕಸಭೆ ಚುನಾವಣೆಯ ದಿನಾಂಕ| ಚುನಾವಣಾ ದಿನಾಂಕ ಪ್ರಕಟಿಸಿದ ಕೇಂದ್ರ ಚುನಾವಣಾ ಆಯೋಗ| ಏ.11ರಿಂದ ಮೇ 19ರವರೆಗೆ ನಡೆಯಲಿದೆ ಲೋಕ ಸಮರ| ಕರ್ನಾಟಕದಲ್ಲಿ ಎರಡು ಹಂತದ ಲೋಕಸಭೆ ಚುನಾವಣೆ| ರಾಜ್ಯವಾರು, ಕೇಂದ್ರಾಡಳಿತ ಪ್ರದೇಶಗಳ ಚುನಾವಣಾ ದಿನಾಂಕ ಪಟ್ಟಿ ಇಲ್ಲಿದೆ| ಇಂದಿನಿಂದಲೇ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಗೆ|
ನವದೆಹಲಿ(ಮಾ.10): ಇಡೀ ದೇಶ ಕಾತರದಿಂದ ಕಾಯುತ್ತಿದ್ದ 17ನೇ ಲೋಕಸಭೆ ಚುನಾವಣೆಯ ದಿನಾಂಕ ಇಂದು ಪ್ರಕಟಗೊಂಡಿದೆ. ಕೇಂದ್ರ ಚುನಾವಣಾ ಆಯೋಗ ಇಂದು ಸುದ್ದಿಗೋಷ್ಠಿ ನಡೆಸಿ ಚುನಾವಣಾ ದಿನಾಂಕ ಘೋಷಿಸಿದೆ. ಈ ಬಾರಿ ಒಟ್ಟು 89.98 ಕೋಟಿ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ.
ಒಟ್ಟಾರೆಯಾಗಿ ಏ.11ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿ ಮೇ. 19ರ ವರೆಗೆ ಚುನಾವಣೆ ನಡೆಯಲಿದೆ. ಈ ಮಧ್ಯೆ ಆಂಧ್ರ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇ ಮತ್ತು ಒಡಿಶಾ ವಿಧಾನಸಭೆ ಚುನಾವಣೆಗಳು ಲೋಕಸಭೆ ಚುನಾವಣೆ ಜೊತೆಗೆ ನಡೆಯಲಿವೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರಾ ದೆಹಲಿಯ ವಿಜ್ಞಾನ ಭವನದಲ್ಲಿ ಲೋಕಸಭೆ ಚುನಾವಣೆಯ ದಿನಾಂಕ ಪ್ರಕಟಿಸಿದರು.
ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭಾ ಚುನಾವಣೆ, ಏ.18,23ರಂದು ಮತದಾನ
ಇನ್ನು ಈ ಬಾರಿ ಇದೇ ಮೊದಲ ಬಾರಿಗೆ ಮತದಾನ ಯಂತ್ರದಲ್ಲಿ ಪಕ್ಷದ ಚಿಹ್ನೆ ಜೊತೆಗೆ ಅಭ್ಯರ್ಥಿಯ ಫೋಟೋ ಕೂಡ ಕಾಣಲಿದ್ದು, ಮತದಾರನಿಗೆ ತಾನು ಮತದಾನ ಮಾಡಿದ ಅಭ್ಯರ್ಥಿಯ ಫೋಟೋ ಕಾಣಲಿದೆ ಎಂದು ಚುನವಣಾ ಆಯೋಗ ತಿಳಿಸಿದೆ. ಅಲ್ಲದೇ ಇವಿಎಂ ಜೊತೆಗೆ ವಿವಿ ಪ್ಯಾಟ್‌ಗಳನ್ನೂ ಬಳಸಿಕೊಳ್ಳಲಾಗುವುದು ಎಂದು ಆಯೋಗ ಮಾಹಿತಿ ನೀಡಿದೆ.
23 ರಾಜ್ಯ ಮತ್ತು ಎಲ್ಲಾ ಕೇಂದ್ರಾಡಳಿತ ಪ್ರದೇಶದಲ್ಲಿ ಶೇ. 100ರಷ್ಟು ಮತದಾನ ಗುರುತಿನ ಚೀಟಿ ವಿತರಿಸಲಾಗಿದೆ ಎಂದು ಆಯೋಗ ಹೇಳಿದ್ದು, ಈ ಬಾರಿ ಒಟ್ಟು 8.45 ಕೋಟಿ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಅಲ್ಲದೇ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಐಟಿ ಸೇರಿದಂತೆ ಹಲವು ಇಲಾಖೆಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಆಯೋಗದ ಮುಖ್ಯಸ್ಥರು ತಿಳಿಸಿದ್ದಾರೆ.
ದೇಶಾದ್ಯಂತ ಒಟ್ಟು 10 ಲಕ್ಷ ಮತಗಟ್ಟೆಗಳನ್ನು ತೆರೆಯಲಾಗುವುದು ಎಂದು ತಿಳಿಸಿರುವ ಆಯೋಗ, ಈ ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿಗಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದೆ.
ಈ ಬಾರಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಹಲವು ರಾಜ್ಯಗಳಲ್ಲಿ ಒಂದು ಹಂತ ಮತ್ತು ಇನ್ನೂ ಹಲವು ರಾಜ್ಯಗಳಲ್ಲಿ ಎರಡು ಹಂತಗಳ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತದ ಮತದಾನ ಏ.18(14 ಲೋಕಸಭೆ ಸ್ಥಾನ)ರಂದು ನಡೆಯಲಿದೆ. ಎರಡನೇ ಹಂತದ ಮತದಾನ ಏ.23(14 ಲೋಕಸಭೆ ಸ್ಥಾನ)ರಂದು ನಡೆಯಲಿದೆ.
#WATCH live from Delhi: Election Commission of India addresses a press conference. https://t.co/E0yEp9LHYq
— ANI (@ANI) March 10, 2019
ಮೊದಲ ಹಂತ(91 ಕ್ಷೇತ್ರಗಳು-20 ರಾಜ್ಯಗಳು):
ಏಪ್ರಿಲ್ 11, ಮತದಾನ
ಎರಡನೇ ಹಂತ(97 ಕ್ಷೇತ್ರಗಳು-):
ಏಪ್ರಿಲ್- 18, ಮತದಾನ
ಮೂರನೇ ಹಂತ(115 ಕ್ಷೇತ್ರಗಳು-14 ರಾಜ್ಯಗಳು):
ಏಪ್ರಿಲ್ 23, ಮತದಾನ
ನಾಲ್ಕನೇ ಹಂತ(71 ಕ್ಷೇತ್ರಗಳು- 9ರಾಜ್ಯಗಳು):
ಏಪ್ರಿಲ್ 29, ಮತದಾನ
ಐದನೇ ಹಂತ(51 ಕ್ಷೇತ್ರಗಳು-7 ರಾಜ್ಯಗಳು):
ಮೇ 6, ಮತದಾನ
ಆರನೇ ಹಂತ(59 ಕ್ಷೇತ್ರಗಳು-7 ರಾಜ್ಯಗಳು):
ಮೇ 12. ಮತದಾನ
ಏಳನೆ ಹಂತ(59ಕ್ಷೇತ್ರಗಳು- 8ರಾಜ್ಯಗಳು):
ಮೇ 19, ಮತದಾನ
ಇನ್ನು 17ನೇ ಲೋಕಸಭೆ ಚುನಾವಣೆಯ ಫಲಿತಾಂಶವನ್ನು ಮೇ.23ರಂದು ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ.
ಒಟ್ಟಿನಲ್ಲಿ 2019ರ ಲೋಕಸಭೆ ಚುನಾವಣೆಯ ದಿನಾಂಕ ಇಂದು ಪ್ರಕಟಗೊಂಡಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಗೆ ತಯಾರಿ ನಡೆಸಲಿವೆ. ಈ ಮಧ್ಯೆ ಮತದಾರ ಕೂಡ ಚುನಾವಣೆಗೆ ಮಾನಸಿಕವಾಗಿ ಸಿದ್ಧಗೊಂಡಿದ್ದು, ತನ್ನ ಮತದ ಮೌಲ್ಯವನ್ನು ತಕ್ಕಡಿಯಲ್ಲಿ ತೂಗಲು ಸಜ್ಜಾಗಿದ್ದಾನೆ.
ಇನ್ನು ಇಂದಿನಿಂದಲೇ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಚುನಾವಣೆ ಭದ್ರತೆಗಾಗಿ ಕೇಂದ್ರ ಗೃಹ ಇಲಾಖೆಯೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರಾ ತಿಳಿಸಿದ್ದಾರೆ.