ಪ್ರೀತಿಯಿಂದ ಸಾಕಿದ ಮಕ್ಕಳು ವೃದ್ಧಾಪ್ಯದಲ್ಲಿ ತಮ್ಮ ಆಸರೆಯಾಗುತ್ತಾರೆ ಎಂದು ನಂಬಿದ್ದ ದಂಪತಿ, ಮಕ್ಕಳು ತಮ್ಮನ್ನು ನೋಡಿಕೊಳ್ಳಲು ನಿರಾಕರಿಸಿದ್ದಕ್ಕೆ ಬೇಸತ್ತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈನ ಪೊರೂರ್‌ನಲ್ಲಿ ನಡೆದಿದೆ.

ಪೊರೂರ್ (ತಮಿಳುನಾಡು)(ಜ.05): ಪ್ರೀತಿಯಿಂದ ಸಾಕಿದ ಮಕ್ಕಳು ವೃದ್ಧಾಪ್ಯದಲ್ಲಿ ತಮ್ಮ ಆಸರೆಯಾಗುತ್ತಾರೆ ಎಂದು ನಂಬಿದ್ದ ದಂಪತಿ, ಮಕ್ಕಳು ತಮ್ಮನ್ನು ನೋಡಿಕೊಳ್ಳಲು ನಿರಾಕರಿಸಿದ್ದಕ್ಕೆ ಬೇಸತ್ತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈನ ಪೊರೂರ್‌ನಲ್ಲಿ ನಡೆದಿದೆ.

ಸರ್ಕಾರಿ ನೌಕರರಾಗಿರುವ ಮನೋಹರನ್ (65) ಹಾಗೂ ಜೀವಾ (56) ಆತ್ಮಹತ್ಯೆಗೆ ಶರಣಾದ ದುರದೃಷ್ಟ ದಂಪತಿಗಳಾಗಿದ್ದಾರೆ. ಮನೋಹರನ್ ಅವರ ಮನೆಯಿಂದ ಬುಧವಾರ ರಾತ್ರಿ ಹೊಗೆ ಬರುತ್ತಿರುವುದನ್ನು ನೋಡಿದ ಪಕ್ಕದ ಮನೆಯವರು ಹೋಗಿ ಪರಿಶೀಲಿಸಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಮನೋಹರನ್ ದೇಹ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದರೆ,

ಪತ್ನಿ ಜೀವಾಳ ಮೃತದೇಹ ಕೋಣೆ ಯೊಂದರಲ್ಲಿ ಪತ್ತೆಯಾಗಿದೆ.

ಮನೋಹರನ್ ಮತ್ತು ಜೀವಾ ದಂಪತಿಗೆ 32 ವರ್ಷದ ಮಗ ಮತ್ತು 29 ವರ್ಷದ ಓರ್ವ ಮಗಳಿದ್ದಾಳೆ. ಸರ್ಕಾರಿ ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದು ವಿಶ್ರಾಂತಿ ಜೀವನವನ್ನು ನಡೆಸುತ್ತಿದ್ದರು. ಆದರೆ, ಮಕ್ಕಳು ತಮ್ಮ ಆರೈಕೆ ಮಾಡದೇ ಇದ್ದಿದ್ದರಿಂದ ಖಿನ್ನತೆಗೆ ಒಳಗಾಗಿದ್ದರು. ಖಿನ್ನತೆ ತಾಳಲಾರದೇ ಮನೋಹರನ್ ತಮ್ಮ ಪತ್ನಿಗೆ ವಿಷ ನೀಡಿದ್ದಾರೆ. ಬಳಿಕ ತಮ್ಮ

ಬೆಡ್‌ರೂಮಿಗೆ ಹೋಗಿ ಪೆಟ್ರೋಲ್ ಸುರಿದುಕೊಂಡು ಬೆಂಕಿಹಚ್ಚಿಕೊಂಡಿದ್ದಾರೆ.

ಮೃತ ದಂಪತಿಯ ಮನೆಯಲ್ಲಿ ಆತ್ಮಹತ್ಯೆ ಪತ್ರವೊಂದು ಲಭ್ಯವಾಗಿದೆ. ಈ ಪತ್ರದಲ್ಲಿ ಸಂಬಂಧಿಗಳನ್ನು ಉದ್ದೇಶಿಸಿ ‘ದಯವಿಟ್ಟು ಈ ಕೆಳಗಿನ ಹಣವನ್ನು ತೆಗೆದುಕೊಂಡು ನಮ್ಮ ಅಂತ್ಯಸಂಸ್ಕಾರ ಮಾಡಿ. ನಮ್ಮ ದೇಹವನ್ನು ಹೂಳಬೇಡಿ. ನಮ್ಮ ದೇಹಗಳನ್ನು ಸುಟ್ಟುಹಾಕಿ’ ಎಂದು ಬರೆದಿದ್ದಾರೆ.

ಅಂತ್ಯಕ್ರಿಯೆಗೆ ಬಳಸುವ ಸಲುವಾಗಿ ಪುತ್ರನ ಹೆಸರಿನಲ್ಲಿ ಸಹಿ ಮಾಡಿದ 2 ಲಕ್ಷ ರು. ಮೌಲ್ಯದ ತಲಾ ಎರಡು ಚೆಕ್‌ಗಳು ಕೂಡ ಮನೆಯಲ್ಲಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.