ಬೆಂಗಳೂರು [ಜು.3] :  ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ನಕಲಿ ದಾಖಲೆ ಸಲ್ಲಿಕೆ ಹಾಗೂ ತಪ್ಪು ಮಾಹಿತಿ ನೀಡುವ ಶಿಕ್ಷಕರು, ಹಾಗೂ ಅದನ್ನು ಸ್ವೀಕರಿಸಿ ದೃಢೀಕರಿಸಿದ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಮೇಲೆ ಕ್ರಿಮಿನಲ್‌ ದೂರು ದಾಖಲಿಸಲಾಗುವುದು ಎಂದು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.

ಬೆಂಗಳೂರಿನ ಜೀವನ್‌ಬಿಮಾನಗರದ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿಯೊಬ್ಬರು ತಮ್ಮ ಪತಿ ಸರ್ಕಾರಿ ನೌಕರರಾಗಿರುವುದರಿಂದ ಪತಿ/ಪತ್ನಿ ಪ್ರಕರಣದಲ್ಲಿ ಪರಿಗಣಿಸಬೇಕು ಎಂದು ತಪ್ಪು ಮಾಹಿತಿ ನೀಡಿರುವುದು ಸಾಬೀತಾಗಿದೆ. ಇದೇ ರೀತಿ ಇನ್ನೂ ಹಲವಾರು ಪ್ರಕರಣಗಳು ಇಲಾಖೆಯಲ್ಲಿ ದಾಖಲಾಗಿವೆ. ಹೀಗಾಗಿ, ತಪ್ಪು ಮಾಹಿತಿ ನೀಡುವ ಅಧಿಕಾರಿ, ಸಿಬ್ಬಂದಿ ಹಾಗೂ ಶಿಕ್ಷಕರ ವಿರುದ್ಧ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸಲಾಗುವುದು ಎಂಬ ಸೂಚನೆ ನೀಡಿದೆ.

ಇಲಾಖೆಗೆ ತಪ್ಪು ಮಾಹಿತಿ ನೀಡಿ ವರ್ಗಾವಣೆ ಪ್ರಕ್ರಿಯೆಯಿಂದ ವಿನಾಯಿತಿ ಪಡೆದಿದ್ದರೆ, ಸಂಬಂಧಪಟ್ಟಶಿಕ್ಷಕರ ವಿನಾಯಿತಿ ರದ್ದುಪಡಿಸಲಾಗುವುದು. ಇದೇ ರೀತಿಯಲ್ಲಿ ಯಾವುದೇ ಪ್ರಕರಣಗಳು ಕಂಡುಬಂದರೂ ಅಂತಹವರ ಎಲ್ಲ ರೀತಿಯ ವಿನಾಯಿತಿಗಳನ್ನು ರದ್ದುಗೊಳಿಸಿ ಕಡ್ಡಾಯವಾಗಿ ಸ್ಥಳ ನಿಯುಕ್ತಿಗೊಳಿಸಿ ವರ್ಗಾವಣೆ ಮಾಡಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಿದೆ.

ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಶಾಲೆಯಿಂದ ಬೇರೊಂದು ಕಡೆ ವರ್ಗಾವಣೆಯಾಗಲು ಇಚ್ಛೆ ಇಲ್ಲದ ಶಿಕ್ಷಕರು ವರ್ಗಾವಣೆ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಪತಿ/ಪತ್ನಿ ಪ್ರಕರಣಗಳಲ್ಲಿ ಪತಿ ಅಥವಾ ಪತ್ನಿಯು ಸರ್ಕಾರಿ ಉದ್ಯೋಗಿ, ಶಿಕ್ಷಕರು ಹಾಗೂ ಕುಟುಂಬದ ಸದಸ್ಯರ ಆರೋಗ್ಯ ಕಾರಣ ನೀಡಿ ನಕಲಿ ವೈದ್ಯಕೀಯ ದಾಖಲೆ ಸೃಷ್ಟಿಸುವುದು ಹಾಗೂ ನಿಯೋಜನೆಯಾಗುತ್ತಿರುವ ಸ್ಥಳದಲ್ಲಿ ಹೆಚ್ಚುವರಿ ಶಿಕ್ಷಕರಿದ್ದಾರೆ ಎಂದು ಹೇಳುವುದು ಸೇರಿದಂತೆ ಹತ್ತಾರು ರೀತಿಯಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದ್ದಾರೆ. ಹಾಗಾಗಿ ಅನುಮಾನ ಬರುವ ಶಿಕ್ಷಕರ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ನಿರ್ದೇಶಕರಿಗೆ ಹೊಣೆಗಾರಿಕೆ ನೀಡಲಾಗಿದೆ. ಪರಿಶೀಲನೆ ನಡೆದ ಬಳಿಕ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.