ಬೆಂಗಳೂರು[ಆ.30]: ಇಡಿ ಪ್ರಕರಣದಲ್ಲಿ ಮಾಜಿ ಸಚಿವ ಡಿ. ಕೆ ಶಿವಕುಮಾರ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದಾರೆ. ಹೀಗಾಗಿ ಟ್ರಬಲ್ ಶೂಟರ್ ಡಿಕೆಶಿಗೆ ಈಗ ಬಂಧನದ ಭೀತಿ ಎದುರಾಗಿದೆ. ಹೀಗಿರುವಾಗ ಇಂದು, ಶುಕ್ರವಾರ ಡಿ. ಕೆ ಶಿವಕುಮಾರ್ ದೆಹಲಿಗೆ ತೆರಳಲು ಸಿದ್ಧರಾಗಿದ್ದಾರೆ. ಹೀಗಿರುವಾಗ ಸಂಕಷ್ಟದಲ್ಲಿರುವ ಡಿಕೆಶಿ ದೆಹಲಿಗೆ ತೆರಳುವ ಮುನ್ನ ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಅವರು ಉಲ್ಲೇಖಿಸಿದ ಪ್ರಮುಖ ಅಂಶಗಳು ಇಲ್ಲಿವೆ.

"

ತೊಂದ್ರೆ ಕೊಡೋದು ಬಿಜೆಪಿ ಕಾಯಕ; ಡಿಕೆಶಿ ಬೆನ್ನಿಗೆ ನಿಂತ ಜೆಡಿಎಸ್ ನಾಯಕ

* ಪಕ್ಷ ಕೊಟ್ಟ ಜವಾಬ್ದಾರಿ ನಿಷ್ಠೆಯಿಂದ ನಿಭಾಯಿಸಿದ್ದೇನೆ: ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಡೆಸಿಕೊಂಡು ಬಂದಿದ್ದೇನೆ. ಗುಜರಾತ್ ಶಾಸಕರು, ಮಹಾರಾಷ್ಟ್ರ ಕಾಪಾಡುವ ಜವಾಬ್ದಾರಿ ನಿಭಾಯಿಸಿದ್ದೇನೆ. ನಮ್ಮ ರಾಜ್ಯದ ಶಾಸಕರನ್ನು ಕಾಪಾಡುವ ಜವಾಬ್ದಾರಿ ನಿರ್ವಹಿಸಿದ್ದೇನೆ. ಕಳೆದ 30 ವರ್ಷಗಳಿಂದ ನನ್ನದೇ ರೀತಿಯ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಪ್ರಾಮಾಣಿಕತೆಯಿಂದ ನಿರಂತರವಾಗಿ ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ನನ್ನ ಹೋರಾಟ ಕೆಲವು ವೇಳೆ ಫಲ ಕೊಟ್ಟಿದೆ, ಕೆಲವು ಸಂದರ್ಭದಲ್ಲಿ ಕೊಟ್ಟಿಲ್ಲ

* ನನ್ನೆಲ್ಲಾ ಆಸ್ತಿಯನ್ನು ಬೇನಾಮಿ ಎಂದು ತೀರ್ಮಾನಿಸಿದ್ದಾರೆ: 85 ವರ್ಷದ ನನ್ನ ತಾಯಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮಧ್ಯಮ ವರ್ಗದ ಕುಟುಂಬದಲ್ಲಿ ನಾವು ಬೆಳೆದು ಬಂದೆವು. ನಮ್ಮ ತಾಯಿ ಸಂಪಾದಿಸಿದ ಕುಟುಂಬದ ಆಸ್ತಿಯನ್ನು ಬೇನಾಮಿ ಆಸ್ತಿ ಎಂದು ಹೇಳಲಾಗುತ್ತಿದೆ. ಡಿಕೆಶಿ ಬೇನಾಮಿ ಆಸ್ತಿ ಸಂಪಾದಿಸಿದ್ದಾರೆಂದು ಆರೋಪಿಸಲಾಗುತ್ತಿದೆ. ಕನಕಪುರ ಮನೆಯಿಂದ ಎಲ್ಲವನ್ನೂ ಬೇನಾಮಿ ಆಸ್ತಿ ಎಂದು ತೀರ್ಮಾನಿಸಿದ್ದಾರೆ. ಇದನ್ನು ಪ್ರಶ್ನಿಸಿ ಕೋರ್ಟ್ ಗೆ ಹೋಗಿದ್ದೆ, ಕೋರ್ಟ್ ತಡೆಯಾಜ್ಞೆ ನೀಡಿದೆ. ತಾಯಿ ಮಗನನ್ನು, ಮಗ ತಾಯಿಯನ್ನು ನಂಬದೇ ಯಾರನ್ನು ನಂಬುವುದು?

* ಇದು ಆದಾಯ ತೆರಿಗೆ ಇಲಾಖೆಗೆ ಸಂಬಂಧಿಸಿದ ಕೇಸ್, ಇಡಿಗಲ್ಲ: ಇದು ಆದಾಯ ತೆರಿಗೆ ಇಲಾಖೆಗೆ ಸಂಬಂಧಿಸಿದ ಕೇಸ್, ಇಡಿಗೆ ಸಂಬಂಧಿಸಿದ ಕೇಸ್ ಅಲ್ಲ. ನಾನು ವಿದೇಶಿ ವ್ಯವಹಾರ ನಡೆಸಿಲ್ಲ, ಮೋಸ ಮಾಡಿಲ್ಲ, ಲಂಚದ ದುಡ್ಡು ಅಲ್ಲ. ಟ್ಯಾಕ್ಸ್ ಕಟ್ಟಿದ್ದೇನೆ, ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ಇಡಿ ಸಮನ್ಸ್ ರದ್ದುಪಡಿಸುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದೆ, ನಿನ್ನೆ ಹೈಕೋರ್ಟ್ ನನ್ನ ಅರ್ಜಿ ವಜಾಗೊಳಿಸಿತು

* ನನ್ನ ಆಪ್ತರ ಮೇಲೆಲ್ಲಾ ಐಟಿ ದಾಳಿ: ನನ್ನ ಕುಟುಂಬ, ನೆಂಟರು, ಸ್ನೇಹಿತರು, ಕಾರ್ಯಕರ್ತರ ಮೇಲೆ ಐಟಿ ದಾಳಿ ನಡೆಸಿದೆ. ನಾನೊಬ್ಬ ನ್ಯಾಯಬದ್ಧ, ಕಾನೂನು ಗೌರವಿಸುವ ಶಾಸಕ. ನ್ಯಾಯಾಂಗ, ಶಾಸಕಾಂಗಕ್ಕೆ ಗೌರವಿಸುವ ಅರಿವು, ಸಮಯಪ್ರಜ್ಞೆ ಇದೆ. ನನಗೆ ಅನೇಕ ಸಂದರ್ಭದಲ್ಲಿ ಅನೇಕ ನೋಟಿಸ್ಗಳು ಬಂದಿವೆ. ನನ್ನ ಸ್ನೇಹಿತರಿಗೂ ನೋಟಿಸ್ ಬಂದಿದೆ. ನನ್ನ ಆಡಿಟರ್ ಮೂಲಕ ನೋಟಿಸ್ಗೆ ಉತ್ತರ ಕೊಟ್ಟಿದ್ದೇನೆ. ಈಗಲೂ ನೋಟಿಸ್ಗೆ ಉತ್ತರ ನೀಡುವಂತೆ ಕೇಳಲಾಗಿದೆ.

ಇಡಿ ಕೇಸ್ : ಡಿ.ಕೆ.ಶಿವಕುಮಾರ್ ಮುಂದಿನ ದಾರಿ ಏನು ?

*ಸಮನ್ಸ್ ಕೊಟ್ಟರು, ಗೌರವದಿಂದ ತೆಗೆದುಕೊಂಡೆ: ನಿನ್ನೆ ರಾತ್ರಿ 9.30ಕ್ಕೆ ಮನೆಗೆ ಬಂದ ತಕ್ಷಣ ನಾಲ್ವರು ಇಡಿ ಅಧಿಕಾರಿಗಳು ಬಂದರು ಸಮನ್ಸ್ ಕೊಟ್ಟರು, ಗೌರವದಿಂದ ತೆಗೆದುಕೊಂಡೆ. ಇಂದು ಮಧ್ಯಾಹ್ನ 1 ಗಂಟೆಗೆ  ವಿಚಾರಣೆಗೆ ಹಾಜರಾಗಲು ನೋಟಿಸ್ ಕೊಟ್ಟಿದ್ದಾರೆ. ಆದರೆ, 1 ಗಂಟೆಯೊಳಗೆ ದೆಹಲಿಗೆ ತಲುಪಲು ಸಾಧ್ಯವಿಲ್ಲ. ಗೌರಿ ಹಬ್ಬ ಇದೆ, ಕುಟುಂಬದ ಪೂರ್ವ ನಿರ್ಧರಿತ ಕೆಲಸಗಳೂ ಇವೆ

* ಕಾನೂನು ವ್ಯಾಪ್ತಿಯಲ್ಲೇ ಹೋರಾಡುತ್ತೇನೆ: ಫಿಕ್ಸ್ ಮಾಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ, ನಾನೂ ಸಹ ಕಾನೂನು ವ್ಯಾಪ್ತಿಯಲ್ಲೇ ಹೋರಾಡುತ್ತೇನೆ. ನನ್ನನ್ನು ನಾನು ರಕ್ಷಿಸಿಕೊಳ್ಳಲು ಕಾನೂನು ಹೋರಾಟ ಮಾಡುತ್ತೇನೆ. ಇಡಿ ಷಡ್ಯಂತ್ರಕ್ಕೆ ಏನ್ ಉತ್ತರ ಕೊಡಬೇಕೆಂದು ಪರಿಶೀಲಿಸುತ್ತಿದ್ದೇನೆ. ಕಾನೂನು ಮತ್ತು ರಾಜಕೀಯವಾಗಿಯೂ ಇದು ನನ್ನ ಹೋರಾಟ

* ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೊಂದು ನ್ಯಾಯವೇ?: ಆಪರೇಷನ್ ಕಮಲದ ಹಣ ಎಲ್ಲಿ ಹೋಯ್ತು? ಜೆಡಿಎಸ್ ಶಾಸಕ ಶ್ರೀನಿವಾಸಗೌಡ ವಿಧಾನಸಭೆಯಲ್ಲೇ ಪ್ರಸ್ತಾಪಿಸಿ ಆಪರೇಷನ್‌ಗೆ ಕೋಟಿ, ಕೋಟಿ ಆಫರ್ ಕೊಟ್ಟಿದ್ದಾರೆಂದು ಆರೋಪಿಸಿದರು. ಅದರ ಬಗ್ಗೆ ಯಾಕೆ ಇಡಿ ಗಮನಹರಿಸಿಲ್ಲ? ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೊಂದು ನ್ಯಾಯವೇ? ನನ್ನ ತೇಜೋವಧೆಗೆ ಎಲ್ಲ ರೀತಿಯ ಷಡ್ಯಂತ್ರ ನಡೆಯುತ್ತಿದೆ.

* ವಿಚಾರಣೆಗೆ ಹೆದರಿ ಓಡಿಹೋಗುವವನಲ್ಲ: ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ವಿಚಾರಣೆಗೆ ಹೆದರಿ ಓಡಿಹೋಗುವವನಲ್ಲ. ಹೆದರುವ ಕೆಂಪೇಗೌಡರ ಮಗ ನಾನಲ್ಲ. ಕಾನೂನು ಬದ್ಧವಾಗಿ, ರಾಜಕೀಯವಾಗಿ ಎಲ್ಲವನ್ನೂ ಎದುರಿಸುವೆ.

* ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ: ನಾನು ತಪ್ಪು ಮಾಡಿಲ್ಲ, ಕೊಲೆ ಮಾಡಿಲ್ಲ, ಲಂಚ ಪಡೆದಿಲ್ಲ. ನ್ಯಾಯಬದ್ಧವಾಗಿ ವ್ಯವಹಾರ ನಡೆಸಿದ್ದೇನೆ, ಬದುಕು ಸಾಗಿಸುತ್ತಿದ್ದೇನೆ. ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ, ಇದನ್ನು ಎದುರಿಸಲು ರೆಡಿ, ನಾನೇ ಮಾಡಿದ ಕಾನೂನಿಗೆ ನಾನೇ ಗೌರವ ಕೊಡುತ್ತೇನೆ.

ತೀರ್ಪು ಪ್ರಕಟಿಸಿದ ಹೈಕೋರ್ಟ್: ED ಬಲೆಗೆ ಡಿಕೆ ಶಿವಕುಮಾರ್‌

* ಸಿಕ್ಕಿದ್ದ ಹಣದಲ್ಲಿ ನನ್ನ ಸ್ನೇಹಿತರದ್ದು ಇದೆ: ಫ್ಲಾಟ್‌ನಲ್ಲಿ ಸಿಕ್ಕಿರುವ ಎಲ್ಲ ಹಣ ನನ್ನದು, ನನ್ನ ಆಪ್ತರದ್ದು. ಆದಾಯ ತೆರಿಗೆ ಇಲಾಖೆ ಮತ್ತು ಇಡಿಗೂ ಮಾಹಿತಿ ನೀಡಿದ್ದೇವೆ. ಸಿಕ್ಕಿದ್ದ ಹಣದಲ್ಲಿ ನನ್ನ ಸ್ನೇಹಿತರದ್ದು ಇದೆ ಎಂದು ನಾನು ಹೇಳುತ್ತಿದ್ದೇನೆ. ಆದರೆ, ಈಗ ಆ ಎಲ್ಲ ಹಣ ನಿನ್ನದೇ ಎಂದು ಐಟಿ ಮತ್ತು ಇಡಿ ಅಧಿಕಾರಿಗಳು ಹೇಳುತ್ತಿದ್ದಾರೆ'