ಕರ್ನಾಟಕದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ವ್ಯಕ್ತಿಗಳಿಗೆ ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ನಿರ್ದೇಶಕರ ಸ್ಥಿರ ದೂರವಾಣಿ ನಂಬರ್‌ನಿಂದ ಹುಸಿ ಕರೆ ಮಾಡಿ ಸಮನ್ಸ್ ನೀಡಿರುವ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ಇಡಿ ನೀಡಿರುವ ದೂರಿನ ಅನ್ವಯ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಾಮಾನ್ಯವಾಗಿ ಇಡಿ ಕಚೇರಿ, ಸ್ಪೀಡ್‌ಪೋಸ್ಟ್ ಮೂಲಕವೇ ಇಲ್ಲವೇ ಕೊರಿಯರ್ ಮೂಲಕ ಸಮನ್ ನೀಡುತ್ತದೆ. ಆದರೆ ಇಲ್ಲಿ ಸ್ಥಿರ ದೂರವಾಣಿಯಿಂದಲೇ ಕರೆ ಮಾಡಿರುವುದರ ಹಿಂದೆ ದುಷ್ಕರ್ಮಿಗಳ ಕೈವಾಡ ಇದೆ ಎಂದು ಶಂಕಿಸಲಾಗಿದೆ.

ನವದೆಹಲಿ: ಕರ್ನಾಟಕದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ವ್ಯಕ್ತಿಗಳಿಗೆ ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ನಿರ್ದೇಶಕರ ಸ್ಥಿರ ದೂರವಾಣಿ ನಂಬರ್‌ನಿಂದ ಹುಸಿ ಕರೆ ಮಾಡಿ ಸಮನ್ಸ್ ನೀಡಿರುವ ವಿಷಯ ಬೆಳಕಿಗೆ ಬಂದಿದೆ.

ಈ ಕುರಿತು ಇಡಿ ನೀಡಿರುವ ದೂರಿನ ಅನ್ವಯ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಾಮಾನ್ಯವಾಗಿ ಇಡಿ ಕಚೇರಿ, ಸ್ಪೀಡ್‌ಪೋಸ್ಟ್ ಮೂಲಕವೇ ಇಲ್ಲವೇ ಕೊರಿಯರ್ ಮೂಲಕ ಸಮನ್ ನೀಡುತ್ತದೆ. ಆದರೆ ಇಲ್ಲಿ ಸ್ಥಿರ ದೂರವಾಣಿಯಿಂದಲೇ ಕರೆ ಮಾಡಿರುವುದರ ಹಿಂದೆ ದುಷ್ಕರ್ಮಿಗಳ ಕೈವಾಡ ಇದೆ ಎಂದು ಶಂಕಿಸಲಾಗಿದೆ.

ಸೆ.5ರಂದು ದೆಹಲಿ ಮೂಲದ ಉದ್ಯಮಿಯೊಬ್ಬರಿಗೂ ಕೂಡಾ ಇಡಿ ನಿರ್ದೇಶಕ ಕರ್ನಲ್ ಸಿಂಗ್ ಕಚೇರಿಯ ಸ್ಥಿರ ದೂರವಾಣಿಯಿಂದ ಕರೆ ಮಾಡಲಾಗಿತ್ತು. ಕರೆ ಮಾಡಿದ ವ್ಯಕ್ತಿ ನಿಮಗೆ ಸಮನ್ ಜಾರಿ ಮಾಡಬೇಕಿರುವ ಹಿನ್ನೆಲೆಯಲ್ಲಿ ಮನೆಯ ವಿಳಾಸ ನೀಡಿ ಎಂದು ಕೋರಿದ್ದಾನೆ. ಇದೇ ರೀತಿ ಡಿಕೆಶಿ ಸೇರಿದಂತೆ ಹಲವರಿಗೆ ದೂರವಾಣಿ ಕರೆ ಮಾಡಲಾಗಿದೆ.

ವಿಶೇಷವೆಂದರೆ ಪ್ರಕರಣದ ಕುರಿತು ತನಿಖೆ ನಡೆಸಿದ ವೇಳೆ, ಇಡಿ ನಿರ್ದೇಶಕರ ಕಚೇರಿಯ ಕರೆ ಮಾಹಿತಿಯಲ್ಲಿ, ಮೇಲ್ಕಂಡ ಯಾವುದೇ ವ್ಯಕ್ತಿಗಳಿಗೂ ಕರೆಯನ್ನು ಮಾಡಿಲ್ಲ. ಆದರೆ ಕರೆ ಸ್ವೀಕರಿಸಿದ ಎಲ್ಲಾ ವ್ಯಕ್ತಿಗಳಿಗೂ ನಿರ್ದೇಶಕರ ಕಚೇರಿಯಿಂದಲೇ ಕರೆ ಹೋಗಿರುವುದು ಖಚಿತಪಟ್ಟಿದೆ. ಹೀಗಾಗಿ ಈ ಕರೆಯ ಹಿಂದೆ ಬೇರೆಯವರ ನಂಬರ್ ಬಳಸಿಕೊಂಡು ಕರೆ ಮಾಡುವ ಸ್ಪೂಫಿಂಗ್ ತಂತ್ರ ಅಡಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಈ ಕುರಿತು ತನಿಖೆ ಆರಂಭಿಸಿದ್ದಾರೆ.