ಅಮೆರಿಕದ ಅರ್ಥಶಾಸ್ತ್ರಜ್ಞರಾದ ವಿಲಿಯಂ ನೋರ್ಡ್‌ಹೌಸ್‌ ಹಾಗೂ ಪೌಲ್‌ ರೋಮರ್‌ ಅವರಿಗೆ 2018ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್‌ ಪಾರಿತೋಷಕ ಘೋಷಿಸಲಾಗಿದೆ. 

ಸ್ಟಾಕ್‌ಹೋಮ್‌: ಹಸಿರು ಅಭಿವೃದ್ಧಿಯನ್ನು ಪ್ರತಿಪಾದಿಸಿದ ಅಮೆರಿಕದ ಅರ್ಥಶಾಸ್ತ್ರಜ್ಞರಾದ ವಿಲಿಯಂ ನೋರ್ಡ್‌ಹೌಸ್‌ ಹಾಗೂ ಪೌಲ್‌ ರೋಮರ್‌ ಅವರಿಗೆ 2018ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್‌ ಪಾರಿತೋಷಕ ಘೋಷಿಸಲಾಗಿದೆ. ನಾವೀನ್ಯತೆ ಮತ್ತು ಹವಾಮಾನ ಬದಲಾವಣೆಯನ್ನು ಆರ್ಥಿಕ ಪ್ರಗತಿಯೊಂದಿಗೆ ಹೇಗೆ ಸಂಯೋಜಿಸಬಹುದು ಎಂಬುದನ್ನು ಈ ಇಬ್ಬರೂ ಪ್ರತ್ಯೇಕವಾಗಿ ಪ್ರತಿಪಾದಿಸಿದ್ದರು.

ನೋರ್ಡ್‌ಹೌಸ್‌ ಅವರು ಯೇಲ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದಾರೆ. ರೋಮರ್‌ ಅವರು ವಿಶ್ವ ಬ್ಯಾಂಕ್‌ನ ಮುಖ್ಯ ಆರ್ಥಿಕ ತಜ್ಞರಾಗಿದ್ದು, ಈಗ ನ್ಯೂಯಾರ್ಕ್ ವಿವಿಸ ಸ್ಟರ್ನ್‌ ಬಿಸಿನೆಸ್‌ ಸ್ಕೂಲ್‌ಲ್ಲಿದ್ದಾರೆ.

ಉದ್ದಿಮೆಗಳು ಮಾಡುವ ವಾಯುಮಾಲಿನ್ಯದಿಂದ ಆಗುವ ಸಮಸ್ಯೆಗಳನ್ನು ತಡೆಗಟ್ಟಬೇಕು ಎಂದರೆ ಎಲ್ಲ ದೇಶಗಳ ಮೇಲೆ ಸಮಾನವಾಗಿ ‘ಇಂಗಾಲ ತೆರಿಗೆ’ ಹೇರಬೇಕು ಎಂಬ ಜಾಗತಿಕ ಯೋಜನೆಯನ್ನು ನೋರ್ಡ್‌ಹೌಸ್‌ ಮಂಡಿಸಿದ್ದರು. ಇನ್ನು ದೀರ್ಘಾವಧಿಯ ಸಂಶೋಧನೆಗಳು ನಿರಂತರ ಮತ್ತು ಸುಸ್ಥಿರ ಬೆಳವಣಿಗೆಯನ್ನು ಹೇಗೆ ಸೃಷ್ಟಿಸುತ್ತವೆ ಎಂಬ ನಮ್ಮ ಮೂಲಭೂತ ಪ್ರಶ್ನೆಗಳಿಗೆ ರೋಮರ್‌ ಉತ್ತರಿಸಿದ್ದಾರೆ ಎಂದು ಸೋಮವಾರ ಪ್ರಶಸ್ತಿ ಘೋಷಿಸಿದ ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್‌ ಸೈನ್ಸಸ್‌ ತಿಳಿಸಿದೆ.

‘ಮಾರುಕಟ್ಟೆಆರ್ಥಿಕತೆಯು ಹೇಗೆ ಹವಾಮಾನ, ಪರಿಸರ ಹಾಗೂ ಜ್ಞಾನದೊಂದಿಗೆ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುತ್ತದೆ ಎಂಬುದರ ಮಾದರಿಗಳನ್ನೂ ಈ ಜೋಡಿಯು ರಚಿಸಿದ್ದಾರೆ’ ಎಂದು ಅಕಾಡೆಮಿ ಪ್ರಶಂಸಿಸಿದೆ. ಪ್ರಶಸ್ತಿಯು 7.4 ಕೋಟಿ ರುಪಾಯಿ ಮೌಲ್ಯ ಹೊಂದಿದ್ದು, ಉಭಯ ತಜ್ಞರು ಹಂಚಿಕೊಳ್ಳಲಿದ್ದಾರೆ.