ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸರ್ಕಾರಿ ಅಧಿಕಾರಿಗಳು ಕೆಲಸಕ್ಕೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಧುಮುಕುತ್ತಿದ್ದಾರೆ.
ಬಳ್ಳಾರಿ (ನ.23): ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸರ್ಕಾರಿ ಅಧಿಕಾರಿಗಳು ಕೆಲಸಕ್ಕೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಧುಮುಕುತ್ತಿದ್ದಾರೆ.
ಈ ಹಿಂದೆ ಕೂಡ್ಲಿಗಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಸವಿ ಶಂಕರ್ ನಾಯ್ಕ್ ಮಟ್ಕಾ ದಂಧೆಗೆ ಸಾಥ್ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಈ ಸಂಬಂಧ ಡಿವೈಎಸ್ಪಿ ಸವಿಶಂಕರ್ ನಾಯ್ಕ್ ವಿರುದ್ಧ ಇಲಾಖೆ ತನಿಖೆ ನಡೆದಿತ್ತು. ಬಳಿಕ ಮರಳಿ ಸಿಓಡಿಯಲ್ಲಿ ಸೇವೆಗೆ ಹಾಜರಾಗಿದ್ದರು. ಈ ಮಧ್ಯೆ ಸಿಓಡಿಯಲ್ಲಿ ಡಿವೈಎಸ್ಪಿಯಾಗಿರುವ ಸವಿ ಶಂಕರ್ ನಾಯ್ಕ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಡಿವೈಎಸ್ಪಿ ಹುದ್ದೆಯಲ್ಲಿದ್ದಾಗಲೇ ಬಿಜೆಪಿಯ ಪರಿವರ್ತನಾ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿರುವ ಫೋಟೊಗಳು ಲಭ್ಯವಾಗಿವೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡ್ ಗ್ರಾಮದಲ್ಲಿ ನಡೆದ ಬಿಜೆಪಿಯ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಬಿಜೆಪಿಯ ಶಾಲು ಹಾಕಿಕೊಂಡು ಪಾಲ್ಗೊಳ್ಳುವುದಲ್ಲದೇ ಬಿಜೆಪಿ ನಾಯಕರಂತೆ ಭಾಷಣ ಬಿಗಿದಿದ್ದಾರೆ. ಇನ್ನೂ ಡಿವೈಎಸ್ಪಿಯಾಗಿರುವ ಸವಿ ಶಂಕರ್ ನಾಯ್ಕ ನಿವೃತ್ತಿಯಾಗಲು ಒಂದೂವರೆ ವರ್ಷ ಕಾಲ ಇರುವಾಗಲೇ ರಾಜಕೀಯಕ್ಕೆ ಧುಮುಕಲು ಸ್ವಂನಿವೃತ್ತಿ ಅರ್ಜಿ ಸಲ್ಲಿಕೆ ಸಲ್ಲಿಸಿದ್ದಾರೆ. ಆದ್ರೆ ಸವಿ ಶಂಕರ್ ನಾಯ್ಕ್ ರ ಸ್ವಂನಿವೃತ್ತಿ ಅರ್ಜಿ ಇನ್ನೂ ಸ್ವೀಕಾರವಾಗುವ ಮುನ್ನವೇ ಬಿಜೆಪಿ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಪೊಲೀಸ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
