ಡಿವೈಎಸ್ಪಿ ಎಂ.ಕೆ.ಗಣಪತಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆರಂಭವಾಗಿರುವ ಬೆನ್ನಲ್ಲೇ ನಿವೃತ್ತ ನ್ಯಾಯಾಧೀಶ.ಕೆ.ಎನ್.ಕೇಶವನಾರಾಯಣ ವಿಚಾರಣಾ ಆಯೋಗ ನಿನ್ನೆ ಕೊಡಗು ಎಸ್ಪಿ ರಾಜೇಂದ್ರ ಪ್ರಸಾದ್ ಅವರನ್ನು ಸತತ 4 ಗಂಟೆ ತೀವ್ರ ವಿಚಾರಣೆಗೊಳಪಡಿಸಿತು. ಆಯೋಗದ ಅಧ್ಯಕ್ಷರ ಪ್ರಶ್ನೆಗಳಿಗೆ ತಬ್ಬಿಬ್ಬಾದ ಎಸ್ಪಿ ಉತ್ತರಿಸಲು ಹರಸಾಹಸಪಟ್ಟರು.
ಮಡಿಕೇರಿ (ನ.14): ಡಿವೈಎಸ್ಪಿ ಎಂ.ಕೆ.ಗಣಪತಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆರಂಭವಾಗಿರುವ ಬೆನ್ನಲ್ಲೇ ನಿವೃತ್ತ ನ್ಯಾಯಾಧೀಶ.ಕೆ.ಎನ್.ಕೇಶವನಾರಾಯಣ ವಿಚಾರಣಾ ಆಯೋಗ ನಿನ್ನೆ ಕೊಡಗು ಎಸ್ಪಿ ರಾಜೇಂದ್ರ ಪ್ರಸಾದ್ ಅವರನ್ನು ಸತತ 4 ಗಂಟೆ ತೀವ್ರ ವಿಚಾರಣೆಗೊಳಪಡಿಸಿತು. ಆಯೋಗದ ಅಧ್ಯಕ್ಷರ ಪ್ರಶ್ನೆಗಳಿಗೆ ತಬ್ಬಿಬ್ಬಾದ ಎಸ್ಪಿ ಉತ್ತರಿಸಲು ಹರಸಾಹಸಪಟ್ಟರು.
ಸಿಬಿಐ ತಂಡ ಸೋಮವಾರ ನ್ಯಾ.ಕೆ.ಎನ್. ಕೇಶವ ನಾರಾಯಣ ವಿಚಾರಣಾ ಆಯೋಗದ ಬಳಿಯಿರುವ ಮಹತ್ವದ ಸಾಕ್ಷ್ಯಗಳನ್ನು ತನ್ನ ಸುಪರ್ದಿಗೆ ಪಡೆಯಲು ಆಯೋಗದ ಕಚೇರಿಗೆ ಭೇಟಿ ಕೊಟ್ಟಿತ್ತು. ಈ ಸಂದರ್ಭದಲ್ಲಿ ಕೊಡಗು ಎಸ್ಪಿ ವಿಚಾರಣೆಗೊಳಪಟ್ಟರು.
ವಿಚಾರಣೆಯಲ್ಲಿ ನಡೆದಿದ್ದೇನು?
ಗಂಭೀರ ಕೇಸ್ ಅಲ್ಲವೇ.: ‘ಡಿವೈಎಸ್ಪಿ ಶವ ಲಾಡ್ಜ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದು ಗಂಭೀರ ಪ್ರಕರಣ ಅಲ್ಲವೇ?’ ಎಂದು ನ್ಯಾ.ಕೆ.ಎನ್.ಕೇಶವನಾರಾಯಣ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಎಸ್ಪಿ ರಾಜೇಂದ್ರ ಪ್ರಸಾದ್ ಹೌದು.. ಸಾರ್ ಎಂದರು. ‘ರಾತ್ರಿ 8.30ಕ್ಕೆ ಘಟನೆ ಗೊತ್ತಾಗಿದೆ. 10.30ಕ್ಕೆ ಶವವನ್ನು ಆಸ್ಪತ್ರೆಗೆ ಸಾಗಿಸಿರುವುದನ್ನು ಪೊಲೀಸ್ ವರದಿಯಲ್ಲಿ ಉಲ್ಲೇಖಿಸಿದೆ. ನೇಣು ಕುಣಿಕೆಯಿಂದ ಶವ ಇಳಿಸುವ ಮುನ್ನ ಬೆರಳಚ್ಚು, ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರನ್ನು ಏಕೆ ಕರೆಸಿಲ್ಲ? ಮಂಗಳೂರು, ಮೈಸೂರಿನಲ್ಲಿ ಎಫ್ಎಸ್ಎಲ್ ತಜ್ಞರು ಇದ್ದರಲ್ಲ. ಹೋಗಲಿ ಶವ ತೆಗೆದ ಬಳಿಕ ಫ್ಯಾನ್, ಪಿಸ್ತೂಲ್, ಬೆಲ್ಟ್, ಬಾಗಿಲು ಮೇಲಿನ ಬೆರಳಚ್ಚು ಮುದ್ರೆ ಏಕೆ ಕಲೆ ಹಾಕಿಲ್ಲ’ ಎಂದು ನ್ಯಾಯಾ ಧೀಶರು ಖಾರವಾಗಿ ಪ್ರಶ್ನಿಸಿದರು.
ಇದರಿಂದ ತಬ್ಬಿಬ್ಬಾದ ರಾಜೇಂದ್ರ ಪ್ರಸಾದ್ ‘ಶವದ ಮೇಲೆ ಗಾಯ ಇರಲಿಲ್ಲ. ಸಮವಸ್ತ್ರ ಸುಕ್ಕಾಗಿರಲಿಲ್ಲ ಎಂದರು. ಹಾಗಾಗಿ ಆತ್ಮಹತ್ಯೆ ಎಂದು ಪರಿಗಣಿಸಿ ಗಣಪತಿ ತಂದೆ ಕುಶಾಲಪ್ಪ, ಸಹೋದರ ಡಿವೈಎಸ್ಪಿ ತಮ್ಮಯ್ಯ ಸಮ್ಮುಖದಲ್ಲಿ ಮುಂಭಾಗ ಶವವನ್ನು ಇಳಿಸಲಾಗಿದೆ’ ಎಂದು ಉತ್ತರಿಸಿದರು.
ಎಸ್ಪಿ ಉತ್ತರಕ್ಕೆ ಅಸಮಾಧಾನಗೊಂಡ ಆಯೋಗ ‘ಶವದ ಮೇಲೆ ಗಾಯ, ಬಟ್ಟೆ ಸುಕ್ಕಾಗಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಎನ್ನಲಾಗುತ್ತಾ? ವಿಷ ಅನಿಲ, ವಿಷಪ್ರಾಶನಕ್ಕೆ ಅವಕಾಶ ಇರುತ್ತಲ್ಲ. ಮರಣೋತ್ತರ ಪರೀಕ್ಷೆ ವೇಳೆ ಗಣಪತಿ ರಕ್ತ ಮತ್ತಿತರ ಮಾದರಿ ಪಡೆಯಲು ಎಫ್ಎಸ್ಎಲ್ ಅಧಿಕಾರಿಗೆ ಸೂಚನೆ ಕೊಟ್ಟಿದ್ದೀರಾ?’ ಎಂಬ ಪ್ರಶ್ನಿಸಿತು. ರಾಜೇಂದ್ರ ಪ್ರಸಾದ್ ‘ಇಲ್ಲ. ಆಸ್ಪತ್ರೆ ಆವರಣದಲ್ಲಿ ಭದ್ರತೆ ನೋಡಿಕೊಳ್ಳುತ್ತಿದ್ದೆ. ಅದನ್ನು ತನಿಖಾಧಿಕಾರಿ ಗಮನಿಸುತ್ತಾರೆ’ ಎಂದರು. ಆಯೋಗ ಎಸ್ಪಿ ವಿಚಾರಣೆ ಅಂತಿಮಗೊಳಿಸಿ ಇನ್ಸ್ಪೆಕ್ಟರ್ ಮೇದಪ್ಪ ವಿಚಾರಣೆಯನ್ನು ಮುಂದೂಡಿತು.
