ಹಿಂದೆ ಸದಾನಂದಗೌಡರು ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸುತ್ತಿದ್ದಂತೆಯೇ ಮೊದಲು ವಿರೋಧಿಸಿದ್ದು ಅಶೋಕ್. ಯಾವುದೇ ಕಾರಣಕ್ಕೂ ಬೆಂಗಳೂರಿನಿಂದ ಗೌಡರಿಗೆ ಟಿಕೆಟ್ ನೀಡಬಾರದು ಎಂಬ ಉದ್ದೇಶದಿಂದ ತೆರೆಮರೆಯಲ್ಲಿ ಸಾಕಷ್ಟು ಪ್ರಯತ್ನ ನಡೆಸಿದರು.
ಬೆಂಗಳೂರು(ಡಿ.11): ರಾಜ್ಯ ಬಿಜೆಪಿಯಲ್ಲಿ ಒಕ್ಕಲಿಗ ನಾಯಕತ್ವಕ್ಕಾಗಿ ಶೀತಲ ಸಮರ ತೀವ್ರಗೊಂಡಿದ್ದು, ಪಕ್ಷದ ಪ್ರಮುಖ ನಿರ್ಧಾರಗಳಿಗೆ ಸಂಬಂಧಿಸಿದಂತೆ ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಅಸಮಾಧಾನಗೊಂಡಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಇದೇ ರೀತಿ ಮುಂದುವರೆದಲ್ಲಿರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಪಕ್ಷದ ಹಿರಿಯ ನಾಯಕರಿಗೆ ತೀಕ್ಷ್ಣವಾದ ಸಂದೇಶ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ತಮ್ಮನ್ನು ಕಡೆಗಣಿಸಿ ಪಕ್ಷದ ಇನ್ನೊಬ್ಬ ಒಕ್ಕಲಿಗ ಜನಾಂಗದ ನಾಯಕ ಆರ್.ಅಶೋಕ್ ಅವರ ಮಾತಿಗಷ್ಟೇ ಮಣೆ ಹಾಕುತ್ತಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಸದಾನಂದಗೌಡರು, ತಾವು ಕೂಡ ರಾಜಧಾನಿ ಬೆಂಗಳೂರನ್ನು ಪ್ರತಿನಿಧಿಸುತ್ತಿರುವುದರಿಂದ ಪಕ್ಷದ ಪ್ರಮುಖ ತೀರ್ಮಾನಗಳಲ್ಲಿ ತಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗಿದೆ.
ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯಲ್ಲಿ ತಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ಅಶೋಕ್ ಅವರು ಹೇಳಿದಂತೆ ನಡೆದಿರುವುದು ಸದಾನಂದಗೌಡರ ಬೇಸರ ಹೆಚ್ಚಿಸಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಅಶೋಕ್ ಮತ್ತು ಸದಾನಂದಗೌಡರ ನಡುವಿನ ಮುಸುಕಿನ ಗುದ್ದಾಟ ಹೊಸದೇನಲ್ಲ. ಹಿಂದೆ ಸದಾನಂದಗೌಡರು ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸುತ್ತಿದ್ದಂತೆಯೇ ಮೊದಲು ವಿರೋಧಿಸಿದ್ದು ಅಶೋಕ್. ಯಾವುದೇ ಕಾರಣಕ್ಕೂ ಬೆಂಗಳೂರಿನಿಂದ ಗೌಡರಿಗೆ ಟಿಕೆಟ್ ನೀಡಬಾರದು ಎಂಬ ಉದ್ದೇಶದಿಂದ ತೆರೆಮರೆಯಲ್ಲಿ ಸಾಕಷ್ಟು ಪ್ರಯತ್ನ ನಡೆಸಿದರು. ಒಂದು ಹಂತದಲ್ಲಿ ಸದಾನಂದಗೌಡರಿಗೆ ಟಿಕೆಟ್ ತಪ್ಪಿಸುವ ಸಲುವಾಗಿ ತಾವೇ ಸ್ಪರ್ಧಿಸುವ ಆಸೆಯಿದೆ ಎಂದೂ ಅಶೋಕ್ ಹೇಳಿಕೆ ನೀಡಿದ್ದರು.
ಅಲ್ಲಿಂದಾಚೆಗೆ ಕಳೆದ ಮೂರುವರೆ ವರ್ಷಗಳಲ್ಲಿ ಅಶೋಕ್ ಮತ್ತು ಸದಾನಂದಗೌಡರ ನಡುವೆ ಹತ್ತಾರು ವಿಷಯಗಳಿಗೆ ಸಂಬಂಧಿಸಿದಂತೆ ಹಗ್ಗಜಗ್ಗಾಟ ನಡೆದಿದೆ. ಅಶೋಕ್ ಅವರಿಗೆ ಪಕ್ಷದ ಪ್ರಭಾವಿ ನಾಯಕ ಹಾಗೂ ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಬೆಂಬಲ ಇರುವುದರಿಂದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇತರ ನಾಯಕರು ಕೂಡ ಸದಾನಂದಗೌಡರ ಪರ ನಿಲ್ಲಲು ಹಿಂಜರಿಯುತ್ತಾರೆ ಎನ್ನುವುದು ಗುಟ್ಟಿನ ವಿಷಯವೇನಲ್ಲ.ಕಳೆದ ಬಿಬಿಎಂಪಿ ಚುನಾವಣೆ ವೇಳೆ ಟಿಕೆಟ್ ಹಂಚಿಕೆ, ನಂತರ ಪಕ್ಷದ ವಿವಿಧ ಹಂತದ ಪದಾಧಿಕಾರಿ ಗಳ ನೇಮಕ ಸೇರಿದಂತೆ ಹಲವು ವಿಷಯಗಳಲ್ಲಿ ಅಶೋಕ್ ಮತ್ತು ಸದಾನಂದಗೌಡರ ನಡುವೆ ಜಿದ್ದಾ ಜಿದ್ದಿಯ ಪ್ರಯತ್ನ ನಡೆದು, ಅಂತಿಮವಾಗಿ ಅಶೋಕ್ ಅವರೇ ಮೇಲುಗೈ ಸಾಧಿಸಿದ್ದರು.
ತೀರಾ ಇತ್ತೀಚೆಗೆ ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ನಡೆಯಿತು. ಬೆಂಗಳೂರು ಪದವೀಧರ ಕ್ಷೇತ್ರದಿಂದ ಜೆಡಿಎಸ್‌ನಿಂದ ವಲಸೆ ಬಂದಿದ್ದ ಎ.ದೇವೇಗೌಡ ಮತ್ತು ನೈಋತ್ಯ ಶಿಕ್ಷಕರಕ್ಷೇತ್ರದಿಂದಡಾ.ಹಾಲನೂರು ಲೇಪಾಕ್ಷಿ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಲಾಯಿತು.ನೈಋತ್ಯ ಕ್ಷೇತ್ರದಿಂದ ಚೇತನ್‌ಗೌಡ ಎಂಬುವ ರನ್ನು ಕಣಕ್ಕಿಳಿಸಿದರೆ ಗೆಲ್ಲಿಸಿಕೊಂಡು ಬರುವುದಾಗಿ ಸದಾನಂದಗೌಡರು ಮತ್ತು ಹೆಬ್ಬಾಳದ ಶಾಸಕ ವೈ.ಎ.ನಾರಾಯಣಸ್ವಾಮಿ (ಹಿಂದೆ ಇದೇ ನೈಋತ್ಯ ಕ್ಷೇತ್ರದಿಂದ ಪರಿಷತ್ತಿಗೆ ಆಯ್ಕೆಯಾಗಿದ್ದವರು) ಮನವಿ ಮಾಡಿದರೂ ಪಕ್ಷದೊಂದಿಗೆ ನಂಟು ಇಲ್ಲದ ಲೇಪಾಕ್ಷಿ ಅವರಿಗೆ ಟಿಕೆಟ್ ನೀಡಲಾಯಿತು. ಚೇತನ್‌ಗೌಡ ಅವರಿಗೆ ಟಿಕೆಟ್ ತಪ್ಪಿಸುವಲ್ಲಿ ಅಶೋಕ್ ಅವರ ಪಾತ್ರವಿದೆ ಎಂಬ ಆಪಾದನೆ ಸದಾನಂದಗೌಡರ ಬೆಂಬಲಿಗರದ್ದು.
ಅದೇ ರೀತಿ ಬೆಂಗಳೂರು ಪದವೀಧರ ಕ್ಷೇತ್ರದಿಂದ ಅಭ್ಯರ್ಥಿಯಾಗಲು ಪಕ್ಷದ ಸಹ ವಕ್ತಾರರಾಗಿರುವ ಎ.ಎಚ್.ಆನಂದ್ ಸೇರಿದಂತೆ ಅನೇಕರು ಇದ್ದರೂ ಜೆಡಿಎಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿ ಸೋಲುಂಡಿದ್ದ ಎ.ದೇವೇಗೌಡ ಅವರನ್ನು ಕರೆತಂದು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ದೇವೇಗೌಡರನ್ನು ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅಶೋಕ್ ಮತ್ತು ಮಾಜಿ ಸಚಿವ ವಿ.ಸೋಮಣ್ಣ ಎನ್ನುವುದು ಜಗಜ್ಜಾಹೀರಾಗಿದೆ. ಈ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸದಾನಂದಗೌಡರು ತೀವ್ರ ವಿರೋಧ ವ್ಯಕ್ತಪಡಿಸಿದರೂ ಅದಕ್ಕೆ ಪಕ್ಷದ ನಾಯಕರು ಕ್ಯಾರೆ ಎನ್ನಲಿಲ್ಲ. ಅಶೋಕ್ ಅವರ ಪರವಾಗಿಯೇ ನಿಂತುಕೊಂಡಿದ್ದು ಸದಾನಂದಗೌಡರಿಗೆ ಬೇಸರ ತರಿಸಿದೆ.
ಹೀಗಾಗಿಯೇ ತಮ್ಮನ್ನು ಕಡೆಗಣಿಸುವುದು ಇದೇ ರೀತಿ ಮುಂದುವರೆದಲ್ಲಿ ತಮ್ಮ ಹಾದಿ ನೋಡಿಕೊಳ್ಳಬೇಕಾಗುತ್ತದೆ. ರಾಜಕೀಯ ನಿವೃತ್ತಿ ತೆಗೆದುಕೊಂಡು ಬಿಡುತ್ತೇನೆ ಎಂಬ ಮಾತನ್ನು ಪಕ್ಷದ ನಾಯಕರಿಗೆ ತಿಳಿಸಿದ್ದಾರೆ ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ.
- ವಿಜಯ್ ಮಲಿಗೆಹಾಳ, ಕನ್ನಡಪ್ರಭ
