Asianet Suvarna News Asianet Suvarna News

ಟೊರೊಂಟೊದಲ್ಲಿ ಕಗ್ಗ ವಾಚನ.. ಮನಸೂರೆಗೊಂಡ ವಿಶಿಷ್ಟ ಅನುಸಂಧಾನ

ಕನ್ನಡ ಭಾಷೆಯ ಸತ್ವವೇ ಹಾಗೆ, ಎಲ್ಲೆ ಇದ್ದರೂ..ಪ್ರಪಂಚದ ಯಾವುದೇ ಮೂಲೆಯಲ್ಲಿ ಇದ್ದರೂ ನಮ್ಮನ್ನು ನಮ್ಮ ತನವನ್ನು ಸದಾ ಸೆಳೆಯುತ್ತಲೆ ಇರುತ್ತದೆ. ಭಾಷೆಯ ಕುರಿತಾಗಿ ಇರುವ ತುಡಿತ ವಿನೂತನ ಕಾರ್ಯಕ್ರಮ ನಿರೂಪಣೆಗೆ ಪ್ರೇರಣೆಯಾಗುತ್ತದೆ. ಅಂಥದ್ದೇ ಒಂದು ವಿಶಿಷ್ಟ ಕಾರ್ಯಕ್ರಮ ಟೊರೊಂಟೊದಲ್ಲಿ ನಡೆಯಿತು.

DVG Mankuthimmana kagga show in toronto, canada
Author
Bengaluru, First Published Aug 27, 2018, 5:54 PM IST

ಟೊರೊಂಟೊ[ಆ.27] ಕನ್ನಡದ ಭಗವದ್ಗೀತೆ ಎಂದೇ ಕರೆಯಲ್ಪಡುವ ಮಂಕುತಿಮ್ಮನ ಕಗ್ಗ, ಕನ್ನಡದ ಮಹಾನ್ ಕವಿಗಳ ಕವನಗಳು ಮತ್ತು ಮಹಾಭಾರತದ ಮೂಲ ಪಾತ್ರವಾದ ಮತ್ಸ್ಯಗಂಧಿಯ ಕಥೆಯನ್ನಾಧರಿಸಿದ "ಕಗ್ಗ-ಕವನ-ಕಥೆ" ಎಂಬ ಒಂದು ಸಾಹಿತ್ಯಿಕ ಪರಿಕಲ್ಪನೆ ಪ್ರದರ್ಶನವು "ಸ್ವಭಾವ" ವೇದಿಕೆಯ ಆಶ್ರಯದಲ್ಲಿ ನಡಯಿತು.

ಆಗಸ್ಟ್ 18 ರಂದು ಟೊರೊಂಟೊದಲ್ಲಿರುವ ಯೋರ್ಕ್ವುಡ್ ಲೈಬ್ರರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ಕನ್ನಡದ ಮನಗಳನ್ನು ಮುಟ್ಟಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಟೊರೊಂಟೋದ ಹಿರಿಯ ಕನ್ನಡಿಗರಾದ  ಸಿ.ಎಂ.ಮೂರ್ತಿ, ಕಮಲಾ ಅಪ್ಪಾಜಿರಾವ್ ಮತ್ತು ಪರಮೇಶ್ವರ ಭಟ್ ಅವರು ದೀಪ ಬೆಳಗುವುದರೊಂದಿಗೆ  ನೆರವೇರಿಸಿಕೊಟ್ಟರು. ಪ್ರಸ್ತಾವಿಕ ಭಾಷಣದಲ್ಲಿ 'ಸ್ವ-ಭಾವ' ವೇದಿಕೆಯನ್ನು ಪ್ರತಿನಿಧಿಸಿ, ವ್ಯವಸ್ಥಾಪಕರಲ್ಲೊಬ್ಬರಾದ ಸುಬ್ರಮಣ್ಯ ಅವರು ಮಾತನಾಡಿದರು.

ನಾವೆಲ್ಲಾ ಕನ್ನಡ ನೆಲದಲ್ಲಿ ಹುಟ್ಟಿ ಅಥವಾ ಬೆಳೆದು ಇಂದು ಕಾರಣಾಂತರಗಳಿಂದ ಕೆನಡಾದಂಥ ದೇಶದಲ್ಲಿ ಅದೆಷ್ಟೋ ವರ್ಷಗಳಿಂದ ಜೀವನ ಕಳೆಯಬೇಕಾಗಿ ಬಂದಿದೆ. ಆದರೂ ನಮ್ಮೆಲ್ಲರ ಮೈ-ಮನಸ್ಸಿನಲ್ಲಿ ಇನ್ನೂ ಕನ್ನಡವೇ ತುಂಬಿದೆ. ಹೇಗೆ ನಮಗೆ "ತಾಯಿ" ಮಾತೆಯೋ ಹಾಗೆಯೇ ನಾವು ನುಡಿಯುವ ಕನ್ನಡವು ನಮಗೆ "ಮಾತೃಭಾಷೆ" ಯಾಗಿದೆ. ನಾವು  ಕರ್ನಾಟಕದಿಂದ ಎಷ್ಟೇ ದೂರವಿದ್ದರೂ ನಾವೆಲ್ಲಾ  ನಮ್ಮ ಕನ್ನಡದ ಭಾಷೆಯನ್ನೂ ಮತ್ತು ಕನ್ನಡ ಸಂಸ್ಕೃತಿಯನ್ನು ಗೌರವಿಸಿ ಉಳಿಸುವುದು ನಮ್ಮ ಕರ್ತವ್ಯವಾಗಿದೆ. ಹೀಗೆ ಮಾಡುವುದರಿಂದ ನಾವು ನಮ್ಮ  ಮಾತೃಭಾಷೆಗೆ ಸ್ವಲ್ಪ ಮಟ್ಟಿಗಾದರೂ ನಮ್ಮ ಋಣವನ್ನು ತೀರಿಸಿದಂತಾಗುತ್ತದ ಎಂದು ಸುಬ್ರಮಣ್ಯ ಸ್ಮರಿಸಿದರು.

‘ಸ್ವಭಾವ' ವೇದಿಕೆಯು ಕನ್ನಡ ಭಾಷೆ, ಕನ್ನಡ ಸಂಸ್ಕ್ರತಿ  ಮತ್ತು ಕನ್ನಡ ಸಾಹಿತ್ಯ, ಸಂಗೀತ ಮುಂತಾದ ಲಲಿತಕಲೆಗಳ ಭಾವಾಭಿವ್ಯಕ್ತ ವೇದಿಕೆಯಾಗಿ ಟೊರೊಂಟೋದಲ್ಲಿ ಒಡಮೂಡಿದೆ. ಕನ್ನಡದಲ್ಲಿ ಚಿಂತನ, ಮಂಥನ, ಪ್ರಕಾಶನ, ಪ್ರದರ್ಶನ ಮತ್ತು ವಾಚನ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವ ಧ್ಯೇಯೋದ್ದೇಶ ಹೊಂದಿದೆ. ಈ ನಿಟ್ಟಿನಲ್ಲಿ "ಕಗ್ಗ-ಕವನ-ಕಥೆ" ಯು ಪ್ರಥಮ ಪ್ರಸ್ತುತಿಯಾಗಿದೆ ಎಂದು ಸ್ವಭಾವ ವೇದಿಕೆ ಹಾಗೂ ಈ ಕಾರ್ಯಕ್ರಮದ ರೂವಾರಿಗಳಾದ ವಿನಾಯಕ ಹೆಗಡೆ, ಪ್ರಶಾಂತ ಸುಬ್ಬಣ್ಣ ಮತ್ತು ಸುಬ್ರಹ್ಮಣ್ಯ ಶಿಶಿಲ ತಿಳಿಸಿಕೊಟ್ಟರು.

DVG Mankuthimmana kagga show in toronto, canada

ಮಹಾಭಾರತದ ಮತ್ಸ್ಯಗಂಧಿಯ ಕಥೆಯಲ್ಲಿ ಬರುವ ತಿರುವುಗಳಿಗೆ ಸರಿಹೊಂದುವ ಮಂಕುತಿಮ್ಮನ ಕಗ್ಗಗಳನ್ನು ಹೊಸೆದು, ಆ ಕಗ್ಗಗಳ ಮೆರುಗನ್ನು ಸಂದರ್ಭೋಚಿತ ಅರ್ಥೈಸುವಿಕೆಯಿಂದ ಹೆಚ್ಚಿಸಿ ಅವಕ್ಕೆ ಪೂರಕವೆನಿಸುವ ಕುವೆಂಪು, ಅಂಬಿಕಾತನಯದತ್ತ, ಕೆ ಎಸ್ ನರಸಿಂಹಸ್ವಾಮಿ, ಗೋಪಾಲಕೃಷ್ಣ ಅಡಿಗ, ಜಯಕವಿ, ಡಾ  ದೊಡ್ಡರಂಗೇಗೌಡ ಮುಂತಾದ ಮಹಾನ್ ಕವಿಗಳ  ಹಾಡುಗಳನ್ನು ಅಳವಡಿಸಿ ಕಾರ್ಯಕ್ರಮದ ಅನುಸಂಧಾನ ಮಾಡಲಾಗಿತ್ತು. ಉದಾಹರಣೆಗೆ ಭೂಮಿಗೆ ಗಂಗೆಯು ಬಂದ ಕಥೆಯ ಜೊತೆಗೆ ‘ಮನುಜಸಂತಾನದಲಿ ಗುಣದವತರುಣವಂತು’ ಎಂಬ ಕಗ್ಗವನ್ನು ಹೋಲಿಸಿ ಮತ್ಸ್ಯಗಂಧಿಯ ಹೃದಯದಲ್ಲಿ ಮೂಡಿದ ಜ್ಞಾನಾವತರಣವನ್ನು ಕಥಾರೂಪದಲ್ಲಿ ಹೇಳಿ, ನಂತರ ಅಂಬಿಕಾತನಯದತ್ತರ ಗಂಗಾವತರಣದ (ಇಳಿದು ಬಾ ತಾಯಿ) ಹಾಡನ್ನು ವಾದ್ಯವೃಂದದೊಡನೆ ನುರಿತ ಸಂಗೀತಜ್ಞರೊಬ್ಬರು ಹಾಡಿದರು.

ಡಾ.ಪ್ರಭಾಕರ ಶಿಶಿಲರ ಕಾದಂಬರಿ  "ಮತ್ಸ್ಯಗಂಧಿ" ಆಧಾರಿತ ಕಥೆಯನ್ನು, ಡಿ.ವಿ ಜಿ ಅವರ ಮಂಕುತಿಮ್ಮನ ಕಗ್ಗದ ಸಾಲುಗಳೊಂದಿಗೆ ಹೋಲಿಸಿ, ಭಾವಗೀತೆಗಳೊಂದಿಗೆ ಪೋಣಿಸಿ, ಸಂಗೀತೋಪಕರಣಗಳ ನಾದದೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಬಹಳ ಅಚ್ಚುಕಟ್ಟಾಗಿ ರಂಜಿಸಿದ್ದಲ್ಲದೆ ಕೊನೆಯವರೆಗೂ  ಪ್ರೇಕ್ಷಕರ ಕುತೂಹಲ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.  ರಂಜಿಸಿ ಪ್ರದರ್ಶನಗೊಂಡುದುದು ಇದೇ ಮೊದಲಬಾರಿ. ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಸಾಮಾಜಿಕ ತಾಣಗಳ ಮೂಲಕ ಪ್ರಶಂಸೆ ಮತ್ತು ಅಭಿನಂದನೆಗಳ ಮಹಾಪೂರವೇ ಹರಿದು ಬಂದಿರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾ ನಟರಾಜ್ ಅವರು ವಿನಾಯಕ್ ಹೆಗಡೆ, ಸುಬ್ರಹ್ಮಣ್ಯ ಶಿಶಿಲ ಮತ್ತು ಪ್ರಶಾಂತ್ ಸುಬ್ಬಣ್ಣ ಅವರನ್ನು ಸಭಿಕರಿಗೆ ಪರಿಚಯಿಸಿದರು.   ಮಧ್ಯೆ ರವೀಂದ್ರ ಕುಮಾರರು ತಮ್ಮ ಹಾಸ್ಯ ಮತ್ತು ಮಿಮಿಕ್ರಿಗಳಿಂದ ಜನರನ್ನು ರಂಜಿಸಿದರು. ವಿನಾಯಕ ಹೆಗಡೆಯವರ  ಸಂಗೀತ ನಿರ್ದೇಶನದಲ್ಲಿ ವಿಧವಿಧವಾದ ಭಾವಗೀತೆಗಳನ್ನು ವಿದ್ಯಾ ನಟರಾಜ್, ಶಶಿಧರ ಗೌರಕ್ಕಲ್, ಮಧು ಕಶ್ಯಪ್, ರಂಜನಾ ವೆಂಕಟೇಶ್, ಕುಮಾರಿ ಮೈತ್ರಿ ಹೆಗಡೆ, ಉಪ ಗುಪ್ತ ಅವರು ಸುಮಧುರವಾಗಿ ಹಾಡಿದರು. ವಿನಾಯಕ್ ಹೆಗಡೆಯವರು ಪ್ರಾಯೋಜಕರನ್ನು ಸ್ಮರಿಸಿ ಗೌರವಿಸಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರಿಗೆ ಕೃತಜ್ಞತೆಯ ವಂದನಾರ್ಪಣೆಗೈದರು.

Follow Us:
Download App:
  • android
  • ios