ದುನಿಯಾ ವಿಜಯ್ ಹಾಗೂ ಪಾನಿಪುರಿ ಕಿಟ್ಟಿ ನಡುವಿನ ಗಲಾಟೆ ಸಂಬಂಧ ಇದೀಗ ಪಾನಿಪುರಿ ಕಿಟ್ಟಿಗೆ ಸ್ಟೇಷನ್ ಬೇಲ್ ದೊರಕಿದೆ. 

ಬೆಂಗಳೂರು :  ನಟ ದುನಿಯಾ ವಿಜಯ್‌ ಮತ್ತು ಅವರ ಪುತ್ರನಿಗೆ ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಜಿಮ್‌ ತರಬೇತುದಾರ ಕೃಷ್ಣಮೂರ್ತಿ ಅಲಿಯಾಸ್‌ ಪಾನಿಪುರಿ ಕಿಟ್ಟಿಯನ್ನು ಬುಧವಾರ ವಿಚಾರಣೆ ನಡೆಸಿದ ಹೈಗ್ರೌಂಡ್ಸ್‌ ಠಾಣೆ ಪೊಲೀಸರು, ಬಳಿಕ ಅವರಿಗೆ ಠಾಣಾ ಜಾಮೀನು ಮಂಜೂರು ಮಾಡಿ ಬಿಡುಗಡೆಗೊಳಿಸಿದ್ದಾರೆ.

ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ಠಾಣೆಗೆ ಬೆಳಗ್ಗೆ 11.30ರ ಸುಮಾರಿಗೆ ತಮ್ಮ ವಕೀಲರ ಜತೆ ಕಿಟ್ಟಿಆಗಮಿಸಿದರು. ಸುಮಾರು ಒಂದೂವರೆ ತಾಸಿಗೂ ಅಧಿಕ ಹೊತ್ತು ತನಿಖಾಧಿಕಾರಿಗಳು ಕಿಟ್ಟಿಅವರಿಂದ ಹೇಳಿಕೆ ದಾಖಲಿಸಿಕೊಂಡರು.

‘ನಾನು ವಿಜಯ್‌ ಅಥವಾ ಅವರ ಪುತ್ರ ಸಾಮ್ರಾಟ್‌ನಿಗೆ ಬೆದರಿಕೆ ಹಾಕಿಲ್ಲ. ನನ್ನ ಅಣ್ಣನ ಮಗ ಮಾರುತಿಗೌಡನನ್ನು ಅಪಹರಿಸಿದ ವಿಚಾರ ಗೊತ್ತಾದ ಕೂಡಲೇ ವಿಜಯ್‌ಗೆ ಮೊಬೈಲ್‌ ಕರೆ ಮಾಡಿದ್ದು ನಿಜ. ಆದರೆ ಮಾರುತಿಗೆ ತೊಂದರೆ ಕೊಡದಂತೆ ವಿನಂತಿಸಿದ್ದೆನೇ ಹೊರತು ಬೆದರಿಕೆ ಹಾಕಿಲ್ಲ. ನಾನು ದೂರು ನೀಡಿದ್ದಕ್ಕೆ ಪ್ರತಿಯಾಗಿ ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ’ ಎಂದು ಕಿಟ್ಟಿಹೇಳಿಕೆ ಕೊಟ್ಟಿರುವುದಾಗಿ ತಿಳಿದುಬಂದಿದೆ.

ವಿಚಾರಣೆ ಮುಗಿಸಿ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಿಟ್ಟಿ, ಜೈಲಿನಲ್ಲಿರುವ ವಿಜಯ್‌ ಅವರು ಜಾಮೀನು ಪಡೆದು ಹೊರಬಂದರೆ ನಮಗೆ ತೊಂದರೆ ಕೊಡಬಹುದು. ಹೀಗಾಗಿ ನಾವು ಜೀವ ರಕ್ಷಣೆ ಕೋರಿ ಪೊಲೀಸರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಕಳೆದ ಶನಿವಾರ ರಾತ್ರಿ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ನಟ ವಿಜಯ್‌ ಹಾಗೂ ಕಿಟ್ಟಿಸೋದರನ ಪುತ್ರ ಮಾರುತಿಗೌಡ ಮಧ್ಯೆ ಗಲಾಟೆ ನಡೆದಿತ್ತು. ಆಗ ಮಾರುತಿ ಗೌಡನನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪದ ಮೇರೆಗೆ ಬಂಧನಕ್ಕೊಳಗಾಗಿ ವಿಜಯ್‌ ಹಾಗೂ ಅವರ ಬೆಂಬಲಿಗರು ಜೈಲು ಸೇರಿದ್ದರು. ಈ ದೂರಿಗೆ ಪ್ರತಿಯಾಗಿ ವಿಜಯ್‌ ಅವರು, ನನಗೆ ಮತ್ತು ನನ್ನ ಪುತ್ರ ಸ್ರಾಮಾಟ್‌ಗೆ ಕಿಟ್ಟಿಹಾಗೂ ಆತನ ಸಹಚರರು ಜೀವ ಬೆದರಿಕೆ ಹಾಕಿದ್ದರು ಎಂದು ದೂರಿದ್ದರು.