ಪೊಲೀಸರು ಹಾಗೂ ತನಿಖಾ ಸಂಸ್ಥೆಗಳ ಕಣ್ಣು ತಪ್ಪಿಸಿ ರಾಜ್ಯಕ್ಕೆ ಡ್ರಗ್ ಸಾಗಾಟ ಮಾಡಲು ಮಾಫಿಯಾಗಾರರು ಭೂ ಮಾರ್ಗವನ್ನೇ ಆರಿಸಿಕೊಂಡಿದ್ದಾರೆ ಎನ್ನುವ ಸ್ಫೋಟಕ ಸತ್ಯವೊಂದು ಬೆಳಕಿಗೆ ಬಂದಿದೆ. ಅಲ್ಲದೇ ದುಬಾರಿ ಮೌಲ್ಯದ ಡ್ರಗ್ಸ್ ವಿದೇಶದಿಂದ ಭಾರತಕ್ಕೆ ಸರಬರಾಜಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಡ್ರಗ್ ಸಾಗಣೆ ಜಾಲ ಇನ್ನಷ್ಟು ವಿಸ್ತಾರವಾಗಿದೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ತಮ್ಮ ಬೆನ್ನುಹತ್ತಿರುವ ತನಿಖಾ ಸಂಸ್ಥೆಗಳ ಕಣ್ತಪ್ಪಿಸಿ ಕರುನಾಡಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡಲು ಡ್ರಗ್ಸ್ ಮಾಫಿಯಾದವರು ಭೂ ಮಾರ್ಗವನ್ನೇ ತಮ್ಮ ಹೆದ್ದಾರಿಯನ್ನಾಗಿ ಮಾಡಿಕೊಂಡಿದ್ದಾರೆ ಎಂಬ ಮಹತ್ವದ ಮಾಹಿತಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಇದಕ್ಕೆ ಪ್ರಮುಖ ಕಾರಣ- ರಸ್ತೆ ಮಾರ್ಗದಲ್ಲಿ ಪೊಲೀಸರ ಕಣ್ಗಾವಲು ಬಲವಾಗಿಲ್ಲದೆ ಇರುವುದು ಹಾಗೂ ಸುಲಭವಾಗಿ ಯಾವುದೇ ಆತಂಕವಿಲ್ಲದೆ ನಿಗದಿತ ಗಮ್ಯ ತಲುಪಬಹುದು ಎಂಬುದಾಗಿದೆ. ಇದಕ್ಕೆ, ಕಳೆದ ಎರಡು ವರ್ಷದಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇವಲ 2 ಡ್ರಗ್ಸ್ ಸಾಗಣೆ ಪ್ರಕರಣ ಪತ್ತೆಯಾಗಿದ್ದೇ ಸಾಕ್ಷಿ.
ಗಾಂಜಾ ಸೇರಿದಂತೆ ಕೆಲವು ಸ್ಥಳೀಯ ಉತ್ಪನ್ನಗಳನ್ನು ಹೊರತು ಪಡಿಸಿದರೆ ಬಹುತೇಕ ದುಬಾರಿ ಮೌಲ್ಯದ ಡ್ರಗ್ಸ್‌ಗಳು ವಿದೇಶದಿಂದ ಭಾರತಕ್ಕೆ ಪೂರೈಕೆಯಾಗುತ್ತಿವೆ. ಅಂತಹ ವಿದೇಶಿ ಡ್ರಗ್ಸ್‌ಗಳು ಮತ್ತು ಸ್ಥಳೀಯ ಡ್ರಗ್ಸ್ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ರಸ್ತೆ ಮೂಲಕವೇ ಸರಬರಾಜಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಡ್ರಗ್ಸ್ ದಂಧೆಯಲ್ಲಿ ಕುಖ್ಯಾತಿ ಪಡೆದಿರುವ ಆಫ್ರಿಕನ್ ಪ್ರಜೆಗಳು ಕೂಡಾ ಬಸ್ಸು ಹಾಗೂ ಕಾರುಗಳಲ್ಲಿ ಮಾದಕ ವಸ್ತು ಸಾಗಾಣಿಕೆ ಮಾಡುತ್ತಿದ್ದಾರೆ. ಇದಕ್ಕೆ ಡ್ರಗ್ಸ್ ಜಾಲದ ಜತೆ ಸಾರಿಗೆ ಉದ್ಯಮದ ಕೆಲವರು ಕೈಜೋಡಿಸಿರುವುದು ಕಂಡುಬಂದಿದೆ. ಈ ನಿಟ್ಟಿನಲ್ಲೇ ಹೆಚ್ಚಿನ ತನಿಖೆ ನಡೆದಿದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.
ಎರಡು ವರ್ಷದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಿಮಾನದ ಮೂಲಕ ಡ್ರಗ್ಸ್ ಸಾಗಣೆ ಮಾಡುತ್ತಿದ್ದ ಎರಡು ಪ್ರಕರಣಗಳನ್ನು ಪತ್ತೆ ಹಚ್ಚಿದರೆ, ರಸ್ತೆ ಮಾರ್ಗದಲ್ಲಿ ಬೆಂಗಳೂರಿಗೆ ಡ್ರಗ್ಸ್ ಸಾಗಿಸುತ್ತಿದ್ದ 438 ಪ್ರಕರಣಗಳನ್ನು ತನಿಖಾ ಸಂಸ್ಥೆಗಳು ದಾಖಲಿಸಿಕೊಂಡಿವೆ. ಇವು ಡ್ರಗ್ಸ್ ಪೂರೈಕೆಯ ದಾರಿ ಬದಲಾಗಿರುವುದನ್ನು ಸ್ಪಷ್ಟವಾಗಿ ಸಾಬೀತುಪಡಿಸುತ್ತದೆ.
ಡ್ರಗ್ಸ್ ಪೂರೈಕೆ ಮಾರ್ಗ ಹೀಗಿದೆ: ವಿದೇಶಿ ಮತ್ತು ಸ್ಥಳೀಯ ಡ್ರಗ್ಸ್ ಮಾರಾಟವನ್ನು ಭಾರತದಲ್ಲಿ ಎರಡು ವಿಭಾಗಗಳನ್ನಾಗಿ ತನಿಖಾ ಸಂಸ್ಥೆಗಳು ಗುರುತಿಸಿವೆ. ಅದರಲ್ಲಿ ಹೊರ ದೇಶದಿಂದ ಡ್ರಗ್ಸ್ ಪೂರೈಕೆಯಾಗುವ ಮಾರ್ಗವನ್ನು ‘ಗೋಲ್ಡನ್ ಟ್ರೈಯಾಂಗಲ್’ (ಮ್ಯಾನ್ಮಾರ್, ಥಾಯ್ಲೆಂಡ್, ಲಾವೋಸ್) ಹಾಗೂ ‘ಗೋಲ್ಡನ್ ಕ್ರೆಸೆಂಟ್’ (ಆಪ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಇರಾನ್) ಎನ್ನಲಾಗುತ್ತಿದೆ. ಇದರಲ್ಲಿ ಜಾಗತಿಕ ಮಟ್ಟದ
ಹೆರಾಯಿನ್ ಮಾರುಕಟ್ಟೆಯಲ್ಲಿ ಆಪ್ಘಾನಿಸ್ತಾನ ಹಿಡಿತ ಸಾಧಿಸಿದ್ದು, ಈ ದೇಶದಿಂದ ಶೇ.80ರಷ್ಟು ಹೆರಾಯಿನ್ ಭಾರತಕ್ಕೆ ಪೂರೈಕೆಯಾಗುತ್ತದೆ.
ಇನ್ನುಳಿದಂತೆ ಎಂಡಿಎಂ ಹಾಗೂ ಕೊಕೇನ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಹೆಚ್ಚಾಗಿ ಆಫ್ರಿಕಾ ದೇಶದ ಪ್ರಜೆಗಳು ಸರಬರಾಜು ಮಾಡುತ್ತಾರೆ ಎಂದು ಮೂಲಗಳು ಹೇಳಿವೆ. ವಿದೇಶದಿಂದ ಕಳ್ಳ ದಾರಿಯಲ್ಲಿ ಭಾರತಕ್ಕೆ ನುಸುಳುವ ಡ್ರಗ್ಸ್, ಕರ್ನಾಟಕಕ್ಕೆ ಚೆನ್ನೈ, ವಿಶಾಖಪಟ್ಟಣ, ಮುಂಬೈ ಹಾಗೂ ಗೋವಾ ಮೂಲಕ ಬರುತ್ತದೆ. ಹಾಗೆಯೇ ‘ಲೋಕಲ್ ಬ್ರಾಂಡ್’ ಗಾಂಜಾವೂ ಆಂಧ್ರಪ್ರದೇಶದ ಗುಂಟೂರು, ಕರ್ನೂಲ್, ಅನಂತಪುರ,
ತಮಿಳುನಾಡು ಹೊಸೂರು, ಕೃಷ್ಣಗಿರಿ, ಒಡಿಶಾ ರಾಜ್ಯದ ಗಡಿಭಾಗಗಳಿಂದ ಸರಬರಾಜಾಗುತ್ತದೆ. ಇನ್ನು ಪಶ್ಚಿಮ ಘಟ್ಟ ಅರಣ್ಯ ಪ್ರದೇಶ, ಚಾಮರಾಜನಗರ, ಮೈಸೂರು, ಕೋಲಾರ ಹಾಗೂ ಮಡಿಕೇರಿ ಸೇರಿದಂತೆ ರಾಜ್ಯದ ಕೆಲವೆಡೆ ಅಕ್ರಮವಾಗಿ ಗಾಂಜಾ ಬೇಸಾಯ ನಡೆದಿದೆ ಎಂದು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳದ (ಕರ್ನಾಟಕ ವಲಯ) ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೀನಿನ ಬಾಕ್ಸ್‌ನಲ್ಲಿ ಗಾಂಜಾ: ಇತ್ತೀಚೆಗೆ ಸಿಸಿಬಿ ಅಧಿಕಾರಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಮೀನಿನ ಬಾಕ್ಸ್‌ನಲ್ಲಿ ಗಾಂಜಾ ತರುತ್ತಿದ್ದ ತಂಡವನ್ನು ಬಂಧಿಸಿ, ಸುಮಾರು ಒಂದು ಕ್ವಿಂಟಲ್ ಗಾಂಜಾ ಜಪ್ತಿ ಮಾಡಿದ್ದರು. ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಕೇರಳದ ನೈನೇಶ್ ಬಂಧಿಸಿ, ಅವರಿಂದ ಒಂದು ಕ್ವಿಂಟಲ್ ಗಾಂಜಾ ವಶಪಡಿಸಿಕೊಂಡಿದ್ದರು.
ಗಡಿಯಲ್ಲಿ ಅವ್ಯವಸ್ಥೆ: ಕರ್ನಾಟಕಕ್ಕೆ ಹೊಂದಿಕೊಂಡಿರುವ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ಗೋವಾ ಗಡಿ ಭಾಗವು ಮಾದಕ ವಸ್ತು ಪೂರೈಕೆದಾರರ ಹೆದ್ದಾರಿಯಾಗಿದೆ. ಈ ಗಡಿ ಪ್ರದೇಶದಲ್ಲಿ ಕಣ್ಗಾವಲು ವಿಚಾರದಲ್ಲಿ ರಾಜ್ಯಗಳ ನಡುವೆ ಸಮನ್ವಯತೆಯ ಕೊರತೆಯಿದೆ. ಹೀಗಾಗಿ ರಾತ್ರಿ ವೇಳೆ ಸುಲಭವಾಗಿ ಗಡಿ ದಾಟುವ ದಂಧೆಕೋರರು, ಅಲ್ಲಿಂದ ನಿರಾತಂಕವಾಗಿ ನಿಗದಿತ ಸ್ಥಳ ತಲುಪಿ ವಹಿವಾಟು ನಡೆಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
