51 ಔಷಧಗಳಿಗೆ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (ಎನ್‌ಪಿಪಿಎ) ದರ ಮಿತಿ ನಿಗದಿ ಪಡಿಸಿದೆ. 13 ಔಷಧಗಳಿಗೆ ದರ ಮಿತಿ ನಿಗದಿಪಡಿಸಲಾಗಿದೆ, 15  ಔಷಧಗಳಿಗೆ ದರ ಮಿತಿ ಪರಿಷ್ಕರಿಸಲಾಗಿದೆ. 23 ಔಷಧಗಳ ಚಿಲ್ಲರೆ ಬೆಲೆಯನ್ನು ನಿಗದಿ ಮಾಡಲಾಗಿದೆ.

ನವದೆಹಲಿ(ನ.25): ಕ್ಯಾನ್ಸರ್, ನೋವು, ಹೃದಯ ರೋಗ ಹಾಗೂ ಚರ್ಮ ವ್ಯಾಧಿಗಳನ್ನು ಗುಣಪಡಿಸಲು ಬಳಸಲಾಗುವಂಥವೂ ಸೇರಿದಂತೆ ವಿವಿಧ ಬಗೆಯ 51 ಔಷಧಗಳಿಗೆ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (ಎನ್‌ಪಿಪಿಎ) ದರ ಮಿತಿ ನಿಗದಿ ಪಡಿಸಿದೆ. 13 ಔಷಧಗಳಿಗೆ ದರ ಮಿತಿ ನಿಗದಿಪಡಿಸಲಾಗಿದೆ, 15 ಔಷಧಗಳಿಗೆ ದರ ಮಿತಿ ಪರಿಷ್ಕರಿಸಲಾಗಿದೆ. 23 ಔಷಧಗಳ ಚಿಲ್ಲರೆ ಬೆಲೆಯನ್ನು ನಿಗದಿ ಮಾಡಲಾಗಿದೆ ಎಂದು ಪ್ರಾಧಿಕಾರ ಪ್ರತ್ಯೇಕ ಅಧಿಸೂಚನೆಗಳಲ್ಲಿ ತಿಳಿಸಿದೆ.

ಈ ಕ್ರಮದಿಂದಾಗಿ ದೊಡ್ಡ ಕರಳು ಅಥವಾ ಗುದದ್ವಾರದ ಕ್ಯಾನ್ಸರ್‌ನ ಚಿಕಿತ್ಸೆಗೆ ಬಳಸಲಾಗುವ ಆಕ್ಷಾಲಿಪ್ಲಾಟಿನ್ (100ಎಂಜಿ ಇಂಜೆಕ್ಷನ್), ಉತ್ತರಪ್ರದೇಶದ ಗೋರಕ್‌ಪುರದಲ್ಲಿ ಭಾರಿ ಪ್ರಮಾಣದಲ್ಲಿ ಮಕ್ಕಳ ಸಾವಿಗೆ ಕಾರಣವಾಗುತ್ತಿರುವ ಜಪಾನೀಸ್ ಎನ್ಸೆಫಲಿಟಿಸ್ (ಮೆದುಳಿನ ಉರಿಯೂತ), ದಡಾರ, ರುಬೆಲ್ಲಾ ಚಿಕಿತ್ಸೆಯ ಔಷಧಗಳ ಬೆಲೆ ಇಳಿಕೆ ಆಗಲಿದೆ. ಈ ಪಟ್ಟಿಯಲ್ಲಿ ಇಲ್ಲದ ಔಷಧಗಳ ಬೆಲೆಯನ್ನು ತಯಾರಕರು ವರ್ಷಕ್ಕೊಮ್ಮೆ ಗರಿಷ್ಠ ಶೇ.10ರಷ್ಟು ಹೆಚ್ಚಳ ಮಾಡಬಹುದಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.