Asianet Suvarna News Asianet Suvarna News

ಹವ್ಯಕ ಮಹಾಸಭೆ ಅಧ್ಯಕ್ಷರಾಗಿ ಡಾ. ಕಜೆ ಪುನರಾಯ್ಕೆ, ಸಮ್ಮೇಳನಕ್ಕೆ ನೆರವಾದವರಿಗೆ ಧನ್ಯವಾದ

ಶ್ರೀ ಅಖಿಲ ಹವ್ಯಕ ಮಹಾಸಭೆ ಅಧ್ಯಕ್ಷರಾಗಿ ಡಾ. ಗಿರಿಧರ ಕಜೆ ಪುನರಾಯ್ಕೆಯಾಗಿದ್ದಾರೆ. ಪುನರಾಯ್ಕೆ ನಂತರ 75ನೇ ವರ್ಷದ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿ ಅನೇಕ ಅಂಶಗಳನ್ನು ತೆರೆದಿಟ್ಟರು.ಅರಮನೆ ಮೈದಾನದಲ್ಲಿ ನಡೆದ ಹವ್ಯಕ ಸಮ್ಮೇಳನ ಯಶಸ್ವಿಯಾಗಿದ್ದಕ್ಕೆ ಸರ್ವರಿಗೂ ಧನ್ಯವಾದ ಅರ್ಪಿಸಿದರು.

Dr.Giridhar Kaje reelected as Akhila Havyaka Mahasabha president
Author
Bengaluru, First Published Mar 11, 2019, 10:17 PM IST

ಬೆಂಗಳೂರು[ಮಾ. 10]  ಡಿಸೆಂಬರ್ ನಲ್ಲಿ ನಡೆದ ಅಮೃತಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನವು ಕೇವಲ ಜಾತಿಯ ಸಮಾವೇಶವಾಗಿರಲಿಲ್ಲ. ಸರ್ವ ಸಮಾಜದವರಿಗೂ ಅಲ್ಲಿ ಅವಕಾಶ ಕಲ್ಪಿಸಲಾಗಿತ್ತು, ಹವ್ಯಕ ಸಂಸ್ಕೃತಿಯನ್ನು ನಾಡಿನಾದ್ಯಂತ ಪಸರಿಸುವ ಕಾರ್ಯಕ್ರಮ ಅದಾಗಿತ್ತು ಎಂದು ಡಾ. ಗಿರಿಧರ ಕಜೆ ಹೇಳಿದರು. 

ಮಲ್ಲೇಶ್ವರದಲ್ಲಿರುವ ಮಹಾಸಭೆಯ ಸಭಾಂಗಣದಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭೆಯ ಸರ್ವಸದಸ್ಯರ 75ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವ ಹವ್ಯಕ ಸಮ್ಮೇಳನ ನಾವು ಆಲೋಚಿಸಿದಕ್ಕಿಂತ ಬಹಳ ಉತ್ತಮವಾಗಿ ನಡೆಯಿತು, ಅಷ್ಟು ದೊಡ್ಡಮಟ್ಟದಲ್ಲಿ ಜನ ಸೇರಿದರೂ ಪೋಲೀಸ್ ಸುರಕ್ಷತೆಯ ಅವಶ್ಯಕತೆಯೇ ಬರಲಿಲ್ಲ. ಸಭೆ - ಪಾರ್ಕಿಂಗ್ - ಊಟೋಪಚಾರ - ನಿರ್ವಹಣೆ ಎಲ್ಲವೂ ಸುವ್ಯವಸ್ಥಿತವಾಗಿತ್ತು, ಯಾವುದೇ ಗೊಂದಲ - ನ್ಯೂನತೆ ಇಲ್ಲದೇ ಕಾರ್ಯಕ್ರಮ ಸಂಪನ್ನವಾಯಿತು. ಇಷ್ಟು ಸುವ್ಯವಸ್ಥಿತವಾಗಿ ನಡೆದ ಕಾರ್ಯಕ್ರಮವನ್ನು ನೋಡಿರಲಿಲ್ಲ ಎಂದು ಅರಮನೆ ಮೈದಾನದ ಆಡಳಿತ ಹಾಗೂ ನೌಕರವರ್ಗದವರೇ ಹೇಳಿ ಸಂತೋಷ ವ್ಯಕ್ತಪಡಿಸಿದರು ಎಂದರು.

ಹವ್ಯಕ ಮಹಾಸಭಾ ಅಮೃತ ಮಹೋತ್ಸವ-75 ಸಾಧಕರಿಗೆ ಕೃಷಿ ರತ್ನ ಪ್ರಶಸ್ತಿ!

ಯೋಧರ ಜಾತಿ ಲೆಕ್ಕಕ್ಕೆ ಉತ್ತರವಾದ ಹವ್ಯಕ ದೇಶರತ್ನ ಸಮ್ಮಾನ:  ಪುಲ್ವಾಮ ದಾಳಿಯ ನಂತರ ದೇಶಾದ್ಯಂತ ಯೋಧರ ಜಾತಿ ಲೆಕ್ಕಾಚಾರ ಚರ್ಚಿತವಾಯಿತು. ಕೀಳುಮಟ್ಟದ ಅಂತಹ ಚರ್ಚೆಗಳಿಗೆ ವಿಶ್ವ ಹವ್ಯಕ ಸಮ್ಮೇಳನದ "ಹವ್ಯಕ ದೇಶ ರತ್ನ" ಪುರಸ್ಕಾರ ಸ್ಪಷ್ಟ ಪ್ರತ್ಯುತ್ತರವಾಗಿತ್ತು. ಅನೇಕರು ಅನೇಕ ಕಡೆಗಳಲ್ಲಿ ಹವ್ಯಕ ದೇಶರತ್ನ ಪುರಸ್ಕಾರದ ವಿಷಯವನ್ನು ಇಟ್ಟುಕೊಂಡು ಕೀಳು ಪ್ರಶ್ನೆ ಹುಟ್ಟುಹಾಕಿದ್ದವರ ಬಾಯಿ ಮುಚ್ಚಿಸಿದರು. ಯೋಧರನ್ನು ವಿಶೇಷವಾಗಿ ಗೌರವಿಸಿದ ಕೀರ್ತಿ ನಮ್ಮ ಸಮಾಜದ್ದಾಗಿದ್ದು, ಇದೀಗ ಇದು ಬೇರೆಯವರಿಗೂ ಆದರ್ಶವಾಗಿದೆ ಎಂದರು.\

ಮಾಧ್ಯಮದವರ ಸಹಕಾರ ಅನನ್ಯ : ವಿಶ್ವ ಸಮ್ಮೇಳನಕ್ಕೆ ಮಾಧ್ಯಮದವರು ನೀಡಿದ ಸಹಕಾರ ಅನನ್ಯವಾಗಿತ್ತು. ಸಮ್ಮೇಳನದ ವಿಚಾರವನ್ನು ನಾಡಿನ ಮನೆ - ಮನಗಳಿಗೆ ಮುಟ್ಟಿಸಿದ ಕೀರ್ತಿ ಮಾಧ್ಯಮದವರಿಗೆ ಸಲ್ಲಬೇಕು. ಮಾಧ್ಯಮದವರಿಂದಾಗಿ ಸಂಘಟಿತ ಸಮಾಜದ ಧ್ವನಿ ನಾಡಿನಾದ್ಯಂತ ಪ್ರತಿಧ್ವನಿಸಿತು. ಹವ್ಯಕ ಸಮಾಜದ ಕೀರ್ತಿ ಎಲ್ಲೆಡೆ ಪಸರಿಸಿತು ಎಂದು ಡಾ. ಕಜೆ ಮಾಧ್ಯಮಗಳಿಗೆ ಕೃತಜ್ಞತೆ ಸಲ್ಲಿಸಿದರು. 

ಬಹಿಷ್ಕಾರದ ಕರೆಗೆ ಜನ ಸೊಪ್ಪು ಹಾಕಲಿಲ್ಲ : ಸಮ್ಮೇಳನವನ್ನು ಬಹಿಷ್ಕರಿಸುವಂತೆ ಕೆಲವರು ಕರೆ ನೀಡಿದರು. ಆದರೆ ಅದಕ್ಕೆ ಸಮಾಜ ಸೊಪ್ಪು ಹಾಕಲಿಲ್ಲ. ನಮ್ಮ ಅಂದಾಜಿಗಿಂತಲೂ ಚೆನ್ನಾಗಿ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮಕ್ಕೆ ಬರಬೇಕಾದವರೆಲ್ಲ ಬಂದು ಭಾಗವಹಿಸಿದರು, ಒಟ್ಟು ಮೂರು ದಿನಗಳಲ್ಲಿ 75 ಸಾವಿರಕ್ಕಿಂತಲೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿದರು. ಇದು ಹವ್ಯಕ ಸಮಾಜ ಎಲ್ಲಿದೆ, ಹವ್ಯಕ ಸಮಾಜದ ನಿಲುವೇನು ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಗುರುಪೀಠದ ಆಶೀರ್ವಾದದಿಂದ ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯಿತು ಎಂದ ಡಾ. ಕಜೆ, ಸಹಸ್ರಾರು ಕಾರ್ಯಕರ್ತರು ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಸಮ್ಮೇಳನವನ್ನು ಇತರರಿಗೆ ಮಾದರಿಯಾಗುವಂತೆ ಯಶಸ್ವಿಯಾಗಿಸಿದ ಕೀರ್ತಿ ಪ್ರತಿಯೊಬ್ಬ ಕಾರ್ಯಕರ್ತರಿಗೆ ಸಲ್ಲಬೇಕು. ಸ್ಪಂದಿಸಿದ - ಸಹಕರಿಸಿದ ಸಮಾಜದ ಎಲ್ಲಾ ಬಂಧುಗಳಿಗೂ ಧನ್ಯವಾದಗಳನ್ನು  ಸಮರ್ಪಿಸಿದರು.

ಮಾಜಿ ಅಧ್ಯಕ್ಷರಾದ ಶ್ರೀಧರ ಭಟ್ ಕಲಸಿ, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಎಂ.ಎನ್ .ಹೆಗಡೆ ಹಾರೂಗಾರ್ ಮಾತನಾಡಿ ಹವ್ಯಕ ಮಹಾಸಭೆಯನ್ನು ಯಶಸ್ವಿಯಾಗಿ ಮುನ್ನೆಡೆಸುತ್ತಿರುವ ಡಾ. ಕಜೆ ನೇತೃತ್ವದ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ಸಮಾಜದ ಅಭ್ಯುದಯಕ್ಕೆ ಇನ್ನಷ್ಟು ತೊಡಗಿಸಿಕೊಳ್ಳುವ ಕುರಿತು ಚರ್ಚೆಗಳಾದವು. 

Dr.Giridhar Kaje reelected as Akhila Havyaka Mahasabha president

ಡಾ. ಕಜೆ ಪುನರಾಯ್ಕೆ : ಸರ್ವಸದಸ್ಯರ ಸಭೆಯ ನಂತರ ನಡೆದ ನಿರ್ದೇಶಕರ ಸಭೆಯಲ್ಲಿ ಡಾ. ಗಿರಿಧರ ಕಜೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಪುನರಾಯ್ಕೆಯಾದರು. ಆ ಮೂಲಕ ಡಾ. ಕಜೆ ನಾಲ್ಕನೇ ಬಾರಿಗೆ ಮಹಾಸಭೆಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಆರ್ .ಎಂ.ಹೆಗಡೆ ಬಾಳೇಸರ ಹಾಗೂ ಕೆಕ್ಕಾರು ಶ್ರೀಧರ್ ಭಟ್ ಉಪಾಧ್ಯಕ್ಷರಾಗಿ, ಸಿಎ ವೇಣುವಿಘ್ನೇಶ್ ಸಂಪ ಪ್ರಧಾನ ಕಾರ್ಯದರ್ಶಿಯಾಗಿ, ಪ್ರಶಾಂತ ಭಟ್ ಯಲ್ಲಾಪುರ, ಶ್ರೀಧರ್ ಭಟ್ ಸಾಲೇಕೊಪ್ಪ ಕಾರ್ಯದರ್ಶಿಗಳಾಗಿ ಹಾಗೂ ಕೃಷ್ಣಮೂರ್ತಿ ಭಟ್ ಯಲಹಂಕ ಕೋಶಾಧಿಕಾರಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು. ನೂತನ ಆಡಳಿತ ಮಂಡಳಿಗೆ ನಿರ್ದೇಶಕರು, ಸಂಚಾಲಕರು ಶುಭಕೋರಿದರು.

Follow Us:
Download App:
  • android
  • ios