ಮೈಸೂರು/ಮಂಡ್ಯ [ಜೂ.30] :  ‘ನೀರಿನ ವಿಚಾರ ನನ್ನನ್ನು ಕೇಳಬೇಡಿ, ನಾನು ರೋಡ್‌ ಮಿನಿಸ್ಟ್ರು, ನೀರಿನ ವಿಚಾರವನ್ನು ನೀರಾವರಿ ಸಚಿವರೇ ಮಾತನಾಡಬೇಕು.’

- ಕಾವೇರಿ ನೀರಿನ ವಿಚಾರವಾಗಿ ಸಚಿವ ಎಚ್‌.ಡಿ.ರೇವಣ್ಣ ಉತ್ತರಿಸಿದ್ದು ಹೀಗೆ. ಮೈಸೂರು ಮತ್ತು ಮಂಡ್ಯಗಳಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಅಣೆಕಟ್ಟೆಯಿಂದ ಒಂದು ಹನಿ ನೀರು ಹೋದರೂ ಎಲ್ಲರಿಗೂ ನೋಟಿಸ್‌ ಬರುತ್ತದೆ, ನೀರಿನ ವಿಚಾರ, ಮತ್ತೊಂದು ವಿಚಾರ ನನ್ನ ಬಳಿ ಕೇಳಬೇಡಿ. ಅದಕ್ಕಾಗಿಯೇ ಜಲ ಸಂಪನ್ಮೂಲ ಸಚಿವರು ಇದ್ದಾರೆ. ಆ ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊಳ್ಳುತ್ತಾರೆ. ನಾನು ರೋಡ್‌ ಮಿನಿಸ್ಟು್ರ, ಅದಕ್ಕೆ ಮಾತ್ರ ನಾನು ಉತ್ತರಿಸುತ್ತೇನೆ ಎಂದರು.

ನಾಲೆಗಳಿಗೆ ನೀರು ಬಿಡುವಂತೆ ನಡೆಯುತ್ತಿರುವ ಪ್ರತಿಭಟನೆಯ ವಿಷಯದಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ನೀರು ಬಿಡುವ ಅಧಿಕಾರ ನಮ್ಮ ಕೈಯಲ್ಲಿ ಇದೆಯೇ ಹೊರತು ಸೋತಿರುವ ದೇವೇಗೌಡರ ಕೈಯಲ್ಲಿದೆಯೇ ಎಂದು ಪ್ರಶ್ನಿಸಿದರು.

ತಮಿಳುನಾಡಿನಿಂದ ವಾಸ್ತವಾಂಶ ಸಂಗ್ರಹ

ನೆರೆಯ ತಮಿಳುನಾಡು ಅಧಿಕಾರಿಗಳು ಕೆಆರ್‌ಎಸ್‌, ಕಬಿನಿ, ಹಾರಂಗಿ, ಯಗಚಿ ಮತ್ತು ಹೇಮಾವತಿ ನದಿಗಳ ನೀರಿನ ವಾಸ್ತವ ಅಂಶಗಳನ್ನು ರಾಜ್ಯಸರ್ಕಾರದ ಗಮನಕ್ಕೆ ಬಾರದಂತೆ ಸಂಗ್ರಹ ಮಾಡುತ್ತಿದ್ದಾರೆ. ಈ ಹಂತದಲ್ಲಿ ಸರ್ಕಾರ ಏನು ತಾನೆ ಮಾಡಲು ಸಾಧ್ಯ? ಆದರೂ ಹಾಸನ ಸಂಸದ ಪ್ರಜ್ವಲ್‌ ಕಾವೇರಿ ವಿಚಾರವಾಗಿ ಲೋಕಸಭೆಯಲ್ಲಿ ದನಿ ಎತ್ತಿದ್ದು, 2 ಟಿಎಂಸಿ ನೀರನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ ಎಂದರು.