ವಾಷಿಂಗ್ಟನ್‌[ಆ.20]: ಭಾರತದಲ್ಲಿ ಆರ್ಥಿಕ ಹಿಂಜರಿತ ಆರಂಭವಾಗಿದೆ ಎಂಬ ವಾದಗಳ ಸಂದರ್ಭದಲ್ಲೇ ಮುಂದಿನ ವರ್ಷದಿಂದ ‘ವಿಶ್ವದ ದೊಡ್ಡಣ್ಣ’ ಅಮೆರಿಕದಲ್ಲೂ ಆರ್ಥಿಕ ಹಿನ್ನಡೆ ಪ್ರಾರಂಭವಾಗಲಿದೆ ಎಂದು ಹಲವು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಆದರೆ ಇದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಳ್ಳಿ ಹಾಕಿದ್ದಾರೆ.

ನ್ಯಾಷನಲ್‌ ಅಸೋಸಿಯೇಷನ್‌ ಫಾರ್‌ ಬಿಸಿನೆಸ್‌ ಎಕನಾಮಿಕ್ಸ್‌ ನಡೆಸಿರುವ ಸಮೀಕ್ಷೆ ಅನ್ವಯ, ಸಮೀಕ್ಷೆಯಲ್ಲಿ ಭಾಗಿಯಾಗಿದ್ದವರ ಪೈಕಿ ಶೇ.2ರಷ್ಟುಜನ ಈಗಾಗಲೇ ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಆರಂಭವಾಗಿದೆ ಎಂದಿದ್ದರೆ, ಶೇ.38ರಷ್ಟುಜನ 2020ರಲ್ಲಿ ಹಿಂಜರಿತ ಆರಂಭವಾಗಲಿದೆ ಎಂದು ಹೇಳಿದ್ದಾರೆ. ಇನ್ನು ಶೇ.34ರಷ್ಟುಜನ 2021ರ ವೇಳೆಗೆ ಅಮೆರಿಕವನ್ನು ಆರ್ಥಿಕ ಹಿಂಜರಿತ ಕಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ನಡೆಸಿದ ಇದೇ ರೀತಿಯ ಸಮೀಕ್ಷೆ ವೇಳೆ ಶೇ.25ರಷ್ಟುಜನ ಮಾತ್ರ 2021ರಲ್ಲಿ ದೇಶವನ್ನು ಆರ್ಥಿಕ ಹಿಂಜರಿತ ಕಾಣಲಿದೆ ಎಂದಿದ್ದರು. ಆದರೆ ಇತ್ತೀಚಿನ ತಿಂಗಳಲ್ಲಿ ನಡೆದ ಕೆಲ ಬೆಳವಣಿಗೆಗಳು, ಕೈಗಾರಿಕಾ ಸೂಚ್ಯಂಕಗಳ ವರದಿಗಳು ಆರ್ಥಿಕ ತಜ್ಞರಲ್ಲೂ ಹಿಂಜರಿತದ ಭೀತಿಯನ್ನು ಹೆಚ್ಚಿಸಿದೆ. ಹೀಗಾಗಿ ಫೆಬ್ರುವರಿಯಲ್ಲಿ ಶೇ.25ರಷ್ಟುಜನರ ಅಭಿಪ್ರಾಯ ಇದೀಗ ಇದೀಗ ಶೇ.34ರಷ್ಟುಜನರ ಅಭಿಪ್ರಾಯವಾಗಿ ಹೊರಹೊಮ್ಮಿದೆ.

ಈ ನಡುವೆ ಆರ್ಥಿಕ ಹಿಂಜರಿತ ಅಮೆರಿಕದಲ್ಲಿ ಈಗಾಗಲೇ ಪ್ರಾರಂಭವಾಗಬೇಕಿತ್ತು. ಆದರೆ ಕೇಂದ್ರೀಯ ಬ್ಯಾಂಕ್‌ನ ಕ್ರಮಗಳಿಂದಾಗಿ ಮುಂದೆ ಹೋಗಿದೆ ಎಂದು ರಾಷ್ಟ್ರೀಯ ಉದ್ಯಮ ಆರ್ಥಿಕ ತಜ್ಞರ ಸಮಿತಿಯ ಸಮೀಕ್ಷೆ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್‌, ಎಲ್ಲದಕ್ಕೂ ನಾನು ಸಜ್ಜಾಗಿದ್ದೇನೆ. ಆರ್ಥಿಕ ಹಿಂಜರಿತ ಬರುತ್ತದೆ ಎಂದು ನನಗೆ ಅನ್ನಿಸುವುದಿಲ್ಲ. ನಾವು ಅತ್ಯುತ್ತಮ ಸ್ಥಿತಿಯಲ್ಲಿದ್ದೇವೆ. ನಾಗರಿಕರೂ ಶ್ರೀಮಂತರಿದ್ದಾರೆ. ಭಾರಿ ಪ್ರಮಾಣದ ತೆರಿಗೆ ಕಡಿತ ಮಾಡಿದ್ದೇನೆ. ಹೀಗಾಗಿ ಜನರ ಬಳಿ ಹಣ ಇದೆ. ಅವರು ಖರೀದಿ ಮಾಡುತ್ತಿದ್ದಾರೆ. ವಾಲ್‌ಮಾರ್ಟ್‌ ಫಲಿತಾಂಶ ನೋಡಿದೆ. ಅವರು ಆಕಾಶದಲ್ಲಿದ್ದಾರೆ. ನಮ್ಮ ದೇಶದಷ್ಟುಉತ್ತಮ ಆರ್ಥಿಕ ಸ್ಥಿತಿ ವಿಶ್ವದ ಯಾವುದೇ ದೇಶವೂ ಇಲ್ಲ ಎಂದು ತಿಳಿಸಿದ್ದಾರೆ.

ತೆರಿಗೆ ಸಂಬಂಧಿತ ವಿವಾದಗಳ ಕಾರಣ, ವಿಶ್ವದ ಎರಡು ಅತಿ ದೊಡ್ಡ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಇದು ಜಾಗತಿಕ ಆರ್ಥಿಕತೆ ಸೇರಿದಂತೆ ಉಭಯ ದೇಶಗಳ ಆರ್ಥಿಕತೆ ಮೇಲೂ ಗಂಭೀರ ಪರಿಣಾಮ ಬೀರಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಟ್ರಂಪ್‌, ಚೀನಾದ ಕೆಲ ಉತ್ಪನ್ನಗಳ ಮೇಲೆ ತಕ್ಷಣದಿಂದ ಹೇರಲು ಉದ್ದೇಶಿಸಿದ್ದ ಹೆಚ್ಚುವರಿ ತೆರಿಗೆ ಜಾರಿಯನ್ನು ಡಿ.15ರವರೆಗೂ ಮುಂದೂಡಿದ್ದಾರೆ. ಇದು ಟ್ರಂಪ್‌ ಅವರನ್ನೂ ಆರ್ಥಿಕ ಹಿಂಜರಿತ ಭೀತಿ ಕಾಣುತ್ತಿರುವ ಸುಳಿವು ಎನ್ನಲಾಗಿದೆ.

ಸಮೀಕ್ಷೆ ವಿವರ

ಶೇ.2: ಈಗಾಗಲೇ ಅಮೆರಿಕದಲ್ಲಿ ಆರ್ಥಿಕ ಹಿಂಜರಿಕೆ ಇದೆ

ಶೇ.34: 2021ರಲ್ಲಿ ಅಮೆರಿಕಕ್ಕೆ ಆರ್ಥಿಕ ಹಿಂಜರಿಕೆ ಕಾಡಲಿದೆ

ಶೇ.38: 2020ರಲ್ಲೇ ಆರ್ಥಿಕ ಹಿಂಜರಿಕೆಗೆ ಅಮೆರಿಕ ತುತ್ತಾಗಲಿದೆ